ADVERTISEMENT

ಸಾವನ್ನಪ್ಪಿದವರ ಕುಟುಂಬದವರಿಗೆ ಪರಿಹಾರ ನೀಡಿ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 16:24 IST
Last Updated 5 ಜೂನ್ 2022, 16:24 IST

ರಾಯಚೂರು: ‘ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಕುಟುಂಬಕ್ಕೆ ನಗರಸಭೆಯಿಂದ ₹1 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ₹10 ಲಕ್ಷ ಪರಿಹಾರ ಹಾಗೂ ಉದ್ಯೋಗ ನೀಡಬೇಕು. ಸಂತ್ರಸ್ಥರ ಸಾವಿಗೆ ನಗರಸಭೆ ಅಧ್ಯಕ್ಷರು ಕಾರಣರಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಕಾರಣ’ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು,‘ಕಲುಷಿತ ನೀರು ಪೂರೈಕೆ ಮಾಡಿದ ಪರಿಣಾಮ ಇಬ್ಬರ ಸಾವು ಸಂಭವಿಸಿದೆ. ಇದಕ್ಕೆ ಅಧಿಕಾರಿಗಳೇ ಹೊಣೆ. ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲು ಅವರು ಅಧಿಕಾರ ವಹಿಸಿಕೊಂಡು ಕೇವಲ 2 ತಿಂಗಳಷ್ಟೇ ಆಗಿದೆ’ ಎಂದು ಹೇಳಿದರು.

ಅನೇಕ ವರ್ಷಗಳಿಂದ ರಾಂಪೂರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸಿಲ್ಲ. ಇದು ಅಧಿಕಾರಿಗಳ ಕೆಲಸ. ಶುದ್ಧೀಕರಣ ಘಟಕಕ್ಕೆ ನಗರಸಭೆ ಅಧ್ಯಕ್ಷರು ಹಾಗೂ ಶಾಸಕರು ಭೇಟಿ ನೀಡಿ ಸ್ವಚ್ಛ ಮಾಡಲು ಸೂಚನೆ ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಎಚ್ಚರ ವಹಿಸಬೇಕು. ಅಸ್ವಸ್ಥರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ನೀರು ಪೂರೈಕೆ ಹೊಣೆ ನಗರಸಭೆಯದ್ದೇ ಹೊರತು ಶಾಸಕರು, ಸಂಸದರದ್ದಲ್ಲ. ಶುದ್ಧ ಕುಡಿಯುವ ನೀರು ಪೂರೈಸಲಾಗದಿದ್ದರೆ ಕೆಲಸ ಬಿಟ್ಟು ಹೋಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣ ನಮ್ಮ ಪಕ್ಷ ಹಾಗೂ ಆಡಳಿತಕ್ಕೂ ಮುಜುಗರ ತರುವಂತಹದ್ದು. ನಿರಂತರ ಕುಡಿಯುವ ನೀರಿನ ಯೋಜನೆ ಜಾರಿಯಾಗಿದ್ದರೂ ಅನುಷ್ಠಾನಗೊಳ್ಳದೇ ಇರುವುದು ಸಹ ಸರಿಯಲ್ಲ. ಶಾಸಕರು ಕೂಡಲೇ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳು ಅಂಜನೇಯ್ಯ, ನಗರಸಭೆ ಸದಸ್ಯ ಶಶಿರಾಜ, ನಾಗರಾಜ ಹಾಗೂ ಬಿ.ಗೋವಿಂದ ಇದ್ದರು.

ಇಂದು ರಾಯಚೂರು ಬಂದ್: ಅಮರೇಶ

ರಾಯಚೂರು: ‘ನಗರಸಭೆಯಿಂದ ಪೂರೈಕೆ ಮಾಡಿದ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಖಂಡಿಸಿ ಸೋಮವಾರ ರಾಯಚೂರು ನಾಗರಿಕರ ವೇದಿಕೆ ವತಿಯಿಂದ ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವ್ಯಾಪಾರಸ್ಥರು ಬೆಂಬಲಿಸಬೇಕು’ ಎಂದು ಹೋರಾಟದ ಸಂಚಾಲಕ ಜಿ.ಅಮರೇಶ ಮನವಿ ಮಾಡಿದರು.

ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘15 ವರ್ಷಗಳಿಂದ ಕಲುಷಿತ ನೀರು ಸರಬರಾಜು ಮಾಡಲಾಗುತ್ತಿದೆ. ನಗರಸಭೆಯ ಶುದ್ಧ ಕುಡಿಯುವ ನೀರು ನೀಡುವ ಭರವಸೆ ಈಡೇರಿಲ್ಲ. ಕಲುಷಿತ ನೀರು ಸೇವಿಸಿ ಇಂದಿರಾ ನಗರದ ಮಲ್ಲಮ್ಮ ಹಾಗೂ ಲಾಲ್ ಪಹಾಡಿ ಬಡಾವಣೆಯ ಗಫರ್ ಸಾವನ್ನಪ್ಪಿದ್ದಾರೆ. ಇದಕ್ಕೆ ನಗರಸಭೆ ಬೇಜವಾಬ್ದಾರಿಯೇ ಕಾರಣ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಜಲಜೀವನ ಮಿಷನ್, ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದ ನಾಗರಿಕರಿಗೆ ಸಮರ್ಪಕ ಹಾಗೂ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನಗರಸಭೆ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಲು ಸೋಮವಾರ ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ. ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು ಹಾಗೂ ಸಂಘ ಸಂಸ್ಥೆಯ ಮುಖಂಡರು, ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ಬಂದ್ ಕೇವಲ ಪ್ರತಿಭಟನೆಯಾಗಿದ್ದು ಸಾರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಹೋರಾಟದ ಸಂಚಾಲಕ ಖಾಜಾ ಅಸ್ಲಂ ಪಾಶ, ಶ್ರೀನಿವಾಸ ಕೊಪ್ಪರ ಮತ್ತಿತರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.