ರಾಯಚೂರು: ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದ ಗ್ರೀನ್ ಲೈನ್ ಕಂಪನಿಯ ಸ್ಲೀಪರ್ ಬಸ್ ಆಂಧ್ರಪ್ರದೇಶದ ಅನಂತಪುರ ಸಮೀಪ ಆಕಸ್ಮಿಕವಾಗಿ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಲಾಗಿದೆ. ಸಕಾಲದಲ್ಲಿ ಪ್ರಯಾಣಿಕರೊಬ್ಬರು ಎಚ್ಚೆತ್ತುಕೊಂಡಿದ್ದರಿಂದ ರಾಯಚೂರಿನ 25 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅನಂತಪುರ ಜಿಲ್ಲಾ ಕೇಂದ್ರ ಇನ್ನೂ 4 ಕಿ.ಮೀ ಅಂತರದಲ್ಲಿರುವಾಗ ಬೆಳಗಿನ ಜಾವ 2 ಗಂಟೆಗೆ ಬಸ್‌ನ ಹಿಂಬದಿ ಟೈರ್ ಬಳಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಂಗ್ರೆಸ್‌ನ ರಾಯಚೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಬೆಂಕಿಯನ್ನು ನೋಡಿ ಚಾಲಕನ ಗಮನಕ್ಕೆ ತಂದರು.
‘ಟೈರ್‌ಗೆ ಬೆಂಕಿ ಹತ್ತಿರುವುದನ್ನು ಬಸ್ಸಿನ ಚಾಲಕ ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಚಾಲಕನನ್ನು ತರಾಟೆಗೆ ತೆಗೆದುಕೊಂಡ ನಂತರ ಎಲ್ಲರೂ ಎಚ್ಚರಗೊಂಡರು. ಬಸ್ಸಿನಲ್ಲಿದ್ದವರು ಎಚ್ಚರಗೊಂಡು ಗಾಬರಿಗೊಂಡು ಕೆಳಗೆ ಇಳಿದಿದ್ದಾರೆ. ನಿದ್ದೆ ಮಂಪರಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ’ ಎಂದು ನಿರ್ಮಲಾ ಬೆಣ್ಣೆ ಅವರು ತಿಳಿಸಿದರು.
ಕೆಲ ಖಾಸಗಿ ಉದ್ಯೋಗಿಗಳ ಲ್ಯಾಪ್ ಟಾಪ್, ಭಸ್ಮವಾಗಿದ್ದು ರಾಯಚೂರಿನ ಯುವಕರೊಬ್ಬರು ಮೆಡಿಕಲ್ ಶಿಕ್ಷಣದ ದಾಖಲೆ ಪ್ರಮಾಣ ಪತ್ರಗಳು ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬಸ್ ಹೊತ್ತಿ ಉರಿದು ಬೆಂಕಿಗೆ ಆಹುತಿಯಾಗಿದೆ. ನಿರ್ಲಕ್ಷ ವಹಿಸಿದ್ದರೆ ನಿದ್ದೆಯಲ್ಲಿದ್ದವರು ಸಜೀವ ದಹನಗೊಳ್ಳುಯ್ಯೊದ್ದರು ಎಂದು ಪ್ರಯಾಣಿಕರು ಹೇಳಿದರು.
ಅನಂತಪುರದಿಂದ ಮರಳಿ ಬಂದ ರಾಯಚೂರಿನ ಪ್ರಯಾಣಿಕರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದರು. ಆದರೆ, ಘಟನೆ ಆಂಧ್ರಪ್ರದೇಶದಲ್ಲಿ ನಡೆದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.