ADVERTISEMENT

ಕೃಷಿ ಸಚಿವರ ಚಿತ್ರ ದಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 12:30 IST
Last Updated 14 ಸೆಪ್ಟೆಂಬರ್ 2020, 12:30 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸಚಿವರ ಭಾವಚಿತ್ರ ದಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸಚಿವರ ಭಾವಚಿತ್ರ ದಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಕೃಷಿ ಸಚಿವ ಬಿ.ಸಿ. ಪಾಟೀಲ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ. ಸಚಿವ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸಚಿವರ ಭಾವಚಿತ್ರ ದಹಿಸಿ ಸೋಮವಾರ ಪ್ರತಿಭಟನೆ ಮಾಡಿದರು.

ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋದಿಸಿ ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ವಿಚಾರ ಸಂಕಿರಣದಲ್ಲಿ ಕೃಷಿ‌ ಸಚಿವ ಬಿ.ಸಿ.ಪಾಟೀಲ ಅವರು ರೈತ ಸಂಘದ ರಾಜ್ಯಾಧ್ಯಕ್ಷ ಕೂಡಿಹಳ್ಳಿ ಚಂದ್ರಶೇಖರ್ ಅವರಿಗೆ ಅಜ್ಞಾನಿ, ದೊಂಬರಾಟದ ಹೋರಾಟ ಮಾಡ್ತಾರೆ ಎಂದು ಅವಹೇಳನಕಾರಿಯಾಗಿ ಮಾತನಾಡಿ ಸಣ್ಣತನ ಪ್ರದರ್ಶಿಸಿದ್ದಾರೆ. ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರೈತರಿಗೆ ಮರಣ ಶಾಸನವಾಗಿದ್ದು ಇದನ್ನು ಪ್ರಶ್ನಿಸಿದ ರೈತ ಮುಖಂಡರನ್ನು ಅಜ್ಞಾನಿಗಳೆಂದು ಹೀಯಾಳಿಸಿದ್ದು ಖಂಡನೀಯ ಎಂದು ದೂರಿದರು.

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಗೊಬ್ಬರ ಕೊರತೆ, ಕಳಪೆ ಬೀಜ ಮಾರಾಟ ಅಧಿಕಾರಿಗಳ‌ ಭ್ರಷ್ಟಾಚಾರ ‌ಹೆಚ್ಚಾಗಿದೆ‌.‌ ಭೂಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ರೈತರ ವಿರೋಧಿ ಆಡಳಿತ ನಡೆಸುತ್ತಿದೆ. ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿ ಅವರು ಅಧಿಕಾರ ಸ್ವೀಕರಿಸುವಾಗ ಹಸಿರುಶಾಲು ಧರಿಸಿ ರೈತರ ಪರ ಎಂದು‌ ಬಿಂಬಿಸಿಕೊಂಡಿದ್ದು ಈಗ ಕೊರೊನಾ ನೆಪವಾಗಿಟ್ಟುಕೊಂಡು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಕಾಯ್ದೆ ತಂದಿದ್ದು ನಿಮ್ಮ ಜ್ಞಾನ ಎಲ್ಲಿ ಹೋಗಿದೆ. ರೈತರಿಗೆ ಮಾರಕವಾದ ಕಾಯ್ದೆ ತಂದಾಗ ಅರಿವಿಲ್ಲವೇ ಎಂದು
ಆರೋಪಿಸಿದರು.

ADVERTISEMENT

ಮುಂದಿನ ಅಧಿವೇಶನದಲ್ಲಿ‌ ಕೃಷಿ ಸಚಿವರು ರೈತರ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡದೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ ನಾಯಕ, ರವಿಕುಮಾರ್ , ಬಸವರಾಜ ನಾಯಕ, ನರಸಪ್ಪ,ಶ್ಯಾಮಸಿಂಗ್ ,ಮಹೇಂದ್ರ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.