ರಾಯಚೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಇದು ಖಂಡನೀಯ’ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಆನಂತರ ಸಂಸದ ಜಿ.ಕುಮಾರ ನಾಯಕ ಅವರ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಎಲ್ಲ ಬೆಳೆಗಳಿಗೂ ಸಿ2+ಶೇ 50 ದರದಲ್ಲಿ ಕಾಯ್ದೆಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನ ಸಂಗ್ರಹಣೆಯ ಖಾತರಿ ನೀಡಬೇಕು. ರೈತರು ಮತ್ತು ಕೃಷಿ ಕಾರ್ಮಿಕರ ಸಮಗ್ರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡುಬೇಕು. ರಸಗೊಬ್ಬರ, ಬೀಜ, ಕ್ರಿಮಿ, ಕಳೆನಾಶಕಗಳು, ವಿದ್ಯುತ್, ನೀರಾವರಿ ಯಂತ್ರೋಪಕರಣಗಳ ಬಿಡಿ ಭಾಗಗಳು, ಟ್ರ್ಯಾಕ್ಟರ್ ಕೃಷಿ ಪರಿಕರಗಳ ಮೇಲೆ ಜಿಎಸ್‍ಟಿ ಹಾಕಬಾರದು. ಎಲ್ಲ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೋರೇಟ್ ಪರವಾದ ಪಿಎಂಎಫ್‍ಬಿವೈ ಯೋಜನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಆಹಾರ ಉತ್ಪಾದನೆ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು ಹಾಗೂ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ₹10 ಸಾವಿರ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಕೆ.ಜಿ ವೀರೇಶ, ಖಾಜಾ ಅಸ್ಲಂ ಅಹಮ್ಮದ್, ಪ್ರಭಾಕರ ಪಾಟೀಲ, ಜಿಂದಪ್ಪ ವಡ್ಲೂರು, ಮಾರೆಪ್ಪ ಹರವಿ, ರಂಗನಾಥ ಪಾಟೀಲ, ಶ್ರೀನಿವಾಸ ಕಲವಲದೊಡ್ಡಿ, ಸಿ.ಎಚ್.ರವಿಕುಮಾರ, ಮಲ್ಲನಗೌಡ, ಆಂಜನೇಯ ಕುರುಬದೊಡ್ಡಿ, ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಅಶೋಕ ನೀಲಗಲ್, ಸಾಜೀದ್ ಹುಸೇನ್, ಈ.ರಂಗನಗೌಡ ಹಾಗೂ ಶಿವರಾಜ ದೊಡ್ಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.