ADVERTISEMENT

‘ದೇಶದ್ರೋಹ ಪ್ರಕರಣ ದಾಖಲಿಸಿ’

ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಲಿಂಗಸುಗೂರು ಬಂದ್‍

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 3:28 IST
Last Updated 4 ಫೆಬ್ರುವರಿ 2022, 3:28 IST
ಲಿಂಗಸುಗೂರಲ್ಲಿ ಗುರುವಾರ ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಹಿರಿಯ ಮುಖಂಡ ಆರ್. ಮಾನಸಯ್ಯ ಮಾತನಾಡಿದರು‌
ಲಿಂಗಸುಗೂರಲ್ಲಿ ಗುರುವಾರ ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಹಿರಿಯ ಮುಖಂಡ ಆರ್. ಮಾನಸಯ್ಯ ಮಾತನಾಡಿದರು‌   

ಲಿಂಗಸುಗೂರು: ಗಣರಾಜ್ಯೋತ್ಸವದಂದು ರಾಯಚೂರು ನ್ಯಾಯಾಲಯದಲ್ಲಿ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ನ್ಯಾಯಾಧೀಶರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಗುರುವಾರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕರೆಯಲಾಗಿದ್ದ ಲಿಂಗಸುಗೂರು ಬಂದ್‍ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ದುರುದ್ದೇಶ ಪೂರಕವಾಗಿಯೇ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಪರಿಶಿಷ್ಟರಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಸೇವೆಯಿಂದ ಅಮಾನತುಗೊಳಿಸಿ, ಕ್ರಿಮಿನಲ್‍ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳೀಯ ಪ್ರವಾಸಿಮಂದಿರದಿಂದ ಪ್ರತಿಭಟನೆ ಆರಂಭಿಸಿ ಅಂಚೆ ಕಚೇರಿ, ಗಡಿಯಾರ ವೃತ್ತ ಮೂಲಕ ಬಸ್‍ ನಿಲ್ದಾಣ ವೃತ್ತದವರೆಗೆ ನ್ಯಾಯಾಧೀಶರು ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಹಾಕುತ್ತ ಪ್ರತಿಭಟನೆ ಸಾಗಿ ಬಂದಿತು. ಬಸ್‍ ನಿಲ್ದಾಣ ವೃತ್ತ ತಲುಪುತ್ತಿದ್ದಂತೆ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ವಿವಿಧ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಅವರ ಜೀವನ, ಘನತೆ ಗೌರವ, ನಾಡಿಗೆ ನೀಡಿದ ಕೊಡುಗೆಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.

ADVERTISEMENT

ಲಿಂಗಸುಗೂರು ಬಂದ್‍ ಕರೆ ನೀಡಿದ್ದರಿಂದ ಬೆಳಿಗ್ಗೆಯಿಂದ ಪಟ್ಟಣದಾದ್ಯಂತ ಅಂಗಡಿ ಮುಂಗ್ಗಟ್ಟು ಬಂದ್‍ ಆಗಿದ್ದವು. ಗ್ರಾಮೀಣ ಪ್ರದೇಶದಿಂದ ಬಂದಿದ್ದ ಸಾರ್ವಜನಿಕರು ಪರದಾಡುತ್ತಿರುವ ಚಿತ್ರಣ ಸಾಮಾನ್ಯವಾಗಿತ್ತು. ಹೋಟೆಲ್‍, ಖಾನಾವಳಿ ಸೇರಿದಂತೆ ತಿಂಡಿ ತಿನಿಸು ಅಂಗಡಿಗಳು ಬಂದಾಗಿದ್ದರಿಂದ ಒಂದು ಹಂತದಲ್ಲಿ ಪ್ರತಿಭಟನಾಕಾರರು ಕುಡಿಯುವ ನೀರು, ಚಹಾ ಸೇವನೆಗೆ ಪರದಾಡಿದ ಚಿತ್ರಣ ಕಂಡು ಬಂತು.

ಪ್ರತಿಭಟನೆ ನೇತೃತ್ವವನ್ನು ಮೋಹನ ಗೋಸ್ಲೆ, ಲಿಂಗಪ್ಪ ಪರಂಗಿ, ಜಿಲಾನಿಪಾಷ, ಹನುಮಂತಪ್ಪ ವೆಂಕಟಾಪುರ, ಕುಪ್ಪಣ್ಣ ಹೊಸಮನಿ, ಖಾಲಿದ ಚಾವೂಸ್‍, ಪ್ರಭುಲಿಂಗ ಮೇಗಳಮನಿ, ಗುರುಪ್ರಶಾಂತ, ಅನೀಲಕುಮಾರ, ರಮೇಶ ಸುಂಕದ, ವಿಜಯ ಹಟ್ಟಿ, ಹಾಜಪ್ಪ ಕರಡಕಲ್ಲ, ರಮೇಶ ಗೋಸ್ಲೆ, ಹುಲಗಪ್ಪ ಬ್ಯಾಗಿ ಸೇರಿದಂತೆ ಕನ್ನಡಪರ, ದಲಿತ, ಮುಸ್ಲಿಂ, ಟಿಪ್ಪುಸುಲ್ತಾನ, ಬಂಜಾರ ಸಂಘಟನೆಗಳ ಮುಖಂಡರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.