ರಾಯಚೂರು: ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ವಸತಿ ಸೇರಿ ಪುನರ್ವಸತಿ ಸೌಲಭ್ಯ ಹಾಗೂ ಪೌರ ಕಾರ್ಮಿಕರಿಗೆ ಅಗತ್ಯ ಸವಲತ್ತು ಒದಗಿಸಲು ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.
‘ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಕೊಡುವ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಕರ್ಮಚಾರಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ಸೌಲಭ್ಯ ಕಲ್ಪಿಸಲು ತಮ್ಮ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ವರದಿ ನೀಡಬೇಕು. ಪೌರ ಕಾರ್ಮಿಕರಿಗೂ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸುರಕ್ಷಾ ಸಾಧನಗಳನ್ನು ಧರಿಸುವಂತೆ ಮನವರಿಕೆ ಮಾಡಬೇಕು. ಶೌಚಾಲಯದ ನೀರು ಚರಂಡಿಗೆ ಬಾರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಅಂತಹ ಘಟೆನೆ ನಡೆದಲ್ಲಿ ಸಂಬಂಧಿಸಿದ ಮಾಲೀಕರಿಗೆ ಯಾವುದೇ ಮುಲಾಜಿಲ್ಲದೇ ನೋಟಿಸ್ ನೀಡಬೇಕು’ ಎಂದು ಹೇಳಿದರು.
‘ಪೌರಕಾರ್ಮಿಕರಿಗೆ ಕೌಶಲ ಆಧಾರಿತ ತರಬೇತಿ ನೀಡಬೇಕು. ಬೇರೆ-ಬೇರೆ ಕೆಲಸಗಳತ್ತ ಅವರು ಗಮನಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ರೂಪಿಸಬೇಕು. ಪೌರಕಾರ್ಮಿಕರಿಗೆ ಆಯುಷ್ಮಾನ ಭಾರತ ಕಾರ್ಡ್ ಒದಗಿಸಿ ಸರ್ಕಾರದ ನಿರ್ದೇಶನದಂತೆ ವಾರ್ಷಿಕ ₹5 ಲಕ್ಷ ವೆಚ್ಚದ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ನೇರಪಾವತಿಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವಾಸಿಸಲು ಮನೆಗಳನ್ನು ಕಲ್ಪಿಸಿಕೊಡಬೇಕು. ನೇರಪಾವತಿ ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರಿಗೆ ಮತ್ತು ವಸತಿರಹಿತ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮವಹಿಸಬೇಕು’ ಎಂದು ಸೂಚನೆ ನೀಡಿದರು.
‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೇರ ಪಾವತಿ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸ್ವಚ್ಛತಾ, ಕನಿಷ್ಠ ವೇತನ, ಇ.ಎಸ್.ಐ, ಪಿ.ಎಫ್ ಮತ್ತು ವೇತನ ಚೀಟಿ, ಇನ್ಸುರೆನ್ಸ್ ಕಡ್ಡಾಯ ಮಾಡಬೇಕು’ ಎಂದು ತಿಳಿಸಿದರು
ಮಹಾನಗರಪಾಲಿಕೆ ಆಯುಕ್ತ ಜುಬೀನ್ ಮೊಹಾಪಾತ್ರ ಮಾತನಾಡಿ, ‘ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಅವುಗಳನ್ನು ಬಳಕೆ ಮಾಡುವಂತೆ ಜಾಗೃತಿ ಮೂಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಆಯುಕ್ತ ಮಹಾದೇವಸ್ವಾಮಿ, ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿ ಬಿ.ವೈ.ವಾಲ್ಮೀಕಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿಂಧೂರು, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈರಣ್ಣ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಂ.ಎಸ್, ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಸಂತೋಷ ರಾಣಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಪೌರಕಾರ್ಮಿಕರು ಸ್ಕಾವೆಂಜರ್ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ಪ್ರವೇಶಾತಿ ಕಲ್ಪಿಸಲು ವ್ಯವಸ್ಥೆ ಮಾಡಬೇಕು.ಚಂದ್ರಕಲಾ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ
ಕುಟುಂಬದವರೊಂದಿಗೆ ನೇರ ಸಂವಾದ:
ಸ್ವಚ್ಛತಾ ಕಾರ್ಮಿಕರು ಪೌರ ಕಾರ್ಮಿಕರು ಮತ್ತು ಗುರುತಿಸಿದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಮತ್ತು ಮೃತಪಟ್ಟ ಮಾನ್ಯುಯಲ್ ಸ್ಕ್ಯಾವೆಂಜರ್ ಕುಟುಂಬದವರೊಂದಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ ನೇರ ಸಂವಾದ ನಡೆಸಿದರು. ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲೇ ಬಗ್ಗೆ ಹರಿಯುವಂತ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಬಗೆಹರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.