ಲಿಂಗಸುಗೂರು : ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಪಟ್ಟಣದ ಇಬ್ಬರು ವಿದ್ಯಾರ್ಥಿಗಳು ಕ್ರಮವಾಗಿ ಜಿಲ್ಲೆಗೆ ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪಟ್ಟಣದ ವಿದ್ಯಾಚೇತನ ಪಿಯು ಕಾಲೇಜಿನ ವಿದ್ಯಾರ್ಥಿ ಕಿರಣ ಬಾಪುಗೌಡ ಮುದನೂರು 600ಕ್ಕೆ 594 (ಶೇ.99) ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಉಮಾಮಹೇಶ್ವರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಶಾಂತ ಮಲ್ಲಪ್ಪ ಚಕ್ಲಿ 600ಕ್ಕೆ 589 ಅಂಕಗಳಿಸಿ (ಶೇ.98.17) ತೃತೀಯ ಸ್ಥಾನಗಳಿಸಿದ್ದಾರೆ.
‘ನನ್ನ ತಂದೆ ರೈತ. ಅವರ ಆಸೆಯಂತೆ ಹಾಗೂ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದ ಕಷ್ಟುಪಟ್ಟು ಓದಿದ್ದರಿಂದ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದೇನೆ, ಅದು ನನಗೆ ಖುಷಿ ತಂದಿದೆ. ಮುಂದೆ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದೇನೆ. ಅದಕ್ಕೆ ಕಠಿಣ ಪರಿಶ್ರಮ ಹಾಕುವೆ’ ಎಂದು ಜಿಲ್ಲೆಗೆ ಕಿರಣ ಹೇಳಿದರು.
‘ಜಿಲ್ಲೆಗೆ ಪ್ರಥಮ ಸ್ಥಾನಗಳಿಸುವ ನಿರೀಕ್ಷೆ ಇತ್ತು. ಇಂಗ್ಲಿಷ್ ವಿಷಯದ ಕೆಲ ಪ್ರಶ್ನೆಗಳು ಕಠಿಣವಾಗಿದ್ದರಿಂದ ಅಂಕ ಕಡಿಮೆ ಬಂದಿದೆ. ದೊರೆತಿರುವ ತೃತೀಯ ಸ್ಥಾನದಲ್ಲಿ ತೃಪ್ತಿ ಪಡುವೆ. ಡಾಕ್ಟರ್ ಆಗುವ ಗುರಿ ಹೊಂದಿದ್ದೇನೆ. ಸಿಇಟಿ, ನೀಟ್ ಪರೀಕ್ಷೆಗಾಗಿ ತಯಾರಿ ನಡೆಸಿದ್ದೇನೆ’ ಎಂದು ಶಾಂತ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.