ಮಂತ್ರಾಲಯ (ರಾಯಚೂರು): ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಸೋಮವಾರ ಮಧ್ಯಾರಾಧನೆ ವಿಜೃಂಭಣೆಯಿಂದ ಜರುಗಿತು.
ಸುಬುಧೇಂದ್ರ ತೀರ್ಥರು ರಾಯರ ಮೂಲಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನೆರವೇರಿಸಿದರು. ನಂತರ ಆರತಿ ಬೆಳಗಿ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನದಿಂದ ತರಲಾಗಿದ್ದ ದೇವರ ಶೇಷ ವಸ್ತ್ರವನ್ನು ಸಮರ್ಪಿಸಿದರು. ಶ್ರೀಗಳು ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ತರುವಾಯ ಮಠದ ಆವರಣದಲ್ಲಿರುವ ಯತಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಲಾಯಿತು.
ಸ್ವರ್ಣ ರಥದಲ್ಲಿ ರಾಘವೇಂದ್ರ ತೀರ್ಥರ ಬಂಗಾರ ಉತ್ಸಮೂರ್ತಿ ಇಟ್ಟು ಮಂಗಲವಾದ್ಯ, ಮಂತ್ರ ಘೋಷಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಭಜನೆಗಳನ್ನು ಹಾಡುತ್ತಾ ‘ಓಂ ಶ್ರೀ ರಾಘವೇಂದ್ರಾಯ ನಮಃ’ ಎಂದು ಭಕ್ತಿಯಿಂದ ಪಠಿಸಿದರು.
ಇದೇ ಸಂದರ್ಭದಲ್ಲಿ ಗಜ ವಾಹನೋತ್ಸವ, ರಜತ ಹಾಗೂ ಸುವರ್ಣ ರಥೋತ್ಸವ ನಡೆಯಿತು.
ಬೆಂಗಳೂರಿನ ಆರ್.ಕೆ.ಶಂಕರ ಹಾಗೂ ತಂಡದವರು ವೀಣೆ ನುಡಿಸಿದರು. ರಾಯಚೂರಿನ ವಿದ್ವಾನ ಶೇಷಗಿರಿದಾಸ್ ದಾಸವಾಣಿ ಪ್ರಸ್ತುತಪಡಿಸಿದರು. ಬೆಂಗಳೂರಿನ ಪ್ರಭಾತ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು.
ಉತ್ತರಾರಾಧನೆ
ಆಗಸ್ಟ್ 12ರಂದು ಉತ್ತರಾರಾಧನೆ ಬೆಳಿಗ್ಗೆ 8 ಗಂಟೆಗೆ ವಸಂತೋತ್ಸವ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಜ್ರಕವಚ ಸಮರ್ಪಣೆ 10 ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ಸಂಜೆ 5.30ಕ್ಕೆ ಉಡುಪಿಯ ವಿದುಷಿ ರುಕ್ಮಿಣಿ ಹಂಡೆ ರಾಮವತಾರ ಹರಿಕಥೆ ಧಾರವಾಡದ ಪಂಡಿತ ವೆಂಕಟೇಶಕುಮಾರ ಅವರಿಂದ ಹಿಂದೂಸ್ಥಾನಿ ಸಂಗೀತ ಹಾಗೂ ಮಂಗಳೂರಿನ ಕಲಾಶ್ರೀ ನಾಟ್ಯ ಬಳಗ ಭರತ ನಾಟ್ಯ ಪ್ರದರ್ಶಿಸಲಿದೆ. ಆ.13ರಂದು ಬೆಳಿಗ್ಗೆ 10ಕ್ಕೆ ಶ್ರೀರಂಗಂನ ವಿದ್ವಾನ್ ರಾಮಾಚಾರ ಪ್ರವಚನ ನೀಡುವರು. ರಾತ್ರಿ 8 ಗಂಟೆಗೆ ಅಶ್ವ ವಾಹನೋತ್ಸವ ಹಾಗೂ ಸುಗುಣೇಂದ್ರ ತೀರ್ಥರ ಆರಾಧಾನೆ ಸಂಜೆ 5.30ಕ್ಕೆ ಬೆಂಗಳೂರಿನ ವಿದುಷಿ ಎಂ.ಎಸ್.ಸುಬ್ಬಲಕ್ಷ್ಮಿ ಸ್ಯಾಕ್ಸೊಫೋನ್ ನುಡಿಸುವರು. ಸಂಗೀತಾ ಕುಲಕರ್ಣಿ ಅವರಿಂದ ದಾಸವಾಣಿ ಹಾಗೂ ಸುಧಾ ನೃತ್ಯ ಶಾಲೆಯ ಕಲಾವಿದರು ಹರಿದರ್ಶನ ನೃತ್ಯ ರೂಪಕ ಪ್ರಸ್ತುತ ಪಡಿಸಲಿದ್ದಾರೆ. ಆ.14ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ವಿದ್ವಾನ್ ನರಹರಿ ಆಚಾರ್ ವಾಳ್ವೇಕರ ಅವರಿಂದ ಪ್ರವಚನ ಹಾಗೂ ರಾತ್ರಿ 8 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.