ಸಿಂಧನೂರು: ಗ್ರಾಮೀಣ ಪ್ರದೇಶಗಳಲ್ಲಿರುವ ಸ್ತ್ರೀಯರು ಅನುಭವಿಸುವ ವಿವಿಧ ಮೊಗ್ಗಲುಗಳ ತಲ್ಲಣಗಳಿಗೆ ಅಮರೇಶ ಗಿಣಿವಾರರ ಕತೆಗಳು ಕನ್ನಡಿ ಹಿಡಿದಂತಿವೆ ಎಂದು ಸರ್ಕಾರಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ದೇವೇಂದ್ರಪ್ಪ ಜಾಜಿ ಅಭಿಪ್ರಾಯಪಟ್ಟರು.
ಸ್ಥಳೀಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಎಜುಸ್ಯಾಟ್ ಹಾಲ್‍ನಲ್ಲಿ ನಿಸರ್ಗ ಪ್ರಕಾಶನ ಗುಡದೂರು ಹಾಗೂ ಸರ್ಕಾರಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕತೆಗಾರ ಅಮರೇಶ ಗಿಣಿವಾರ ಅವರ ‘ಬೀಜದ ಮನುಷ್ಯ’ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ತುರ್ವಿಹಾಳ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಖಾದರ್‍ಭಾಷಾ ಮಾತನಾಡಿ, ನಿರಂತರ ಅಧ್ಯಯನಶೀಲತೆಯೇ ಅಮರೇಶ ಗಿಣಿವಾರ ಅವರನ್ನು ಉತ್ತಮ ಕತೆಗಾರರನ್ನಾಗಿ ಮಾಡಿದೆ. ಇವರ ಕೃತಿಗಳ ಬಗ್ಗೆ ವಿಮರ್ಶಕರು ಕಣ್ಣು ಹಾಯಿಸದಿರುವುದು ದುರದೃಷ್ಟಕರ ಎಂದು ಹೇಳಿದರು.
ಕೃತಿ ಪರಿಚಯ ಮಾಡಿದ ಉಪನ್ಯಾಸಕ ದೊಡ್ಡಹನುಮಂತ ‘ಸ್ತ್ರೀ ಸಂವೇದನೆಯನ್ನು ಗಿಣಿವಾರರು ಬೀಜದ ಮನುಷ್ಯ ಕೃತಿಯ ಎಂಟು ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಗಿಣಿವಾರ ಭಾಷೆಯೇ ಕತೆಗಳಿಗೆ ಶಕ್ತಿ ನೀಡಿದೆ. ಬಡತನ, ಅಜ್ಞಾನ, ಮೌಢ್ಯತೆ, ಪುರುಷ ಪ್ರಧಾನ ವ್ಯವಸ್ಥೆಯ ದೌರ್ಜನ್ಯ ಇವರ ಕತೆಗಳಲ್ಲಿ ದಟ್ಟವಾಗಿ ಕಾಣುತ್ತಿವೆ’ ಎಂದು ಅಭಿಪ್ರಾಯಪಟ್ಟರು.
ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಟಿ.ಎಸ್.ಗೊರವಾರ ‘ಪರಿಶ್ರಮ ಮತ್ತು ಪ್ರತಿಭೆ ಯಾರ ಸ್ವತ್ತು ಅಲ್ಲ ಎಂಬುದಕ್ಕೆ ಅಮರೇಶ ಗಿಣಿವಾರ ಅವರೇ ನಿದರ್ಶನ. ಬದುಕಿನ ಲೋಕಾನುಭವವನ್ನು ತಮ್ಮ ಕತೆಗಳಲ್ಲಿ ಸಶಕ್ತ ಮತ್ತು ಕಲಾತ್ಮಕವಾಗಿ ನಿರೂಪಿಸಿದ್ದಾರೆ.
ನಿಸರ್ಗ ಪ್ರಕಾಶನದ ಪ್ರಕಾಶನ ಹನುಮೇಶ ಗುಡದೂರು ಮಾತನಾಡಿ, ಬಿಸಿಎಂ ಹಾಸ್ಟೆಲ್‍ನ ಒಡನಾಟವೇ ಅಮರೇಶ ಗಿಣಿವಾರ ಅವರು ಗಟ್ಟಿಸಾಹಿತ್ಯದ ಕತೆಗಾರರನ್ನಾಗಿ ರೂಪಿಸಿದೆ ಎಂದು ಹೇಳಿದರು.
ಕತೆಗಾರ ಅಮರೇಶ ಗಿಣಿವಾರ ಮಾತನಾಡಿ, ಕತೆಗಳಿಗೆ ಮಾಂತ್ರಿಕ ಶಕ್ತಿಯಿದೆ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳು, ರಿಯಾಲಿಟಿ ಶೋಗಳು ಜನರನ್ನು ಮೂರ್ಖರನ್ನಾಗಿಸಿವೆ. ಆದಾಗ್ಯೂ ಪ್ರಮುಖ ಸಾಹಿತಿಗಳ ಪುಸ್ತಕಗಳನ್ನು ಓದುವಿಕೆ ರೂಢಿಸಿಕೊಂಡು ಸಮಾಜದ ತಲ್ಲಣಗಳಿಗೆ ಮುಖಾಮುಖಿ ಆಗಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಚ್.ಕಂಬಳಿ ಉಪಸ್ಥಿತರಿದ್ದರು. ಬಸವರಾಜ ಏಕ್ಕಿ ಹಾಗೂ ಬಸವರಾಜ ಬಾದರ್ಲಿ ಸಂಗಡಿಗರು ಸಮತಾಗೀತೆ ಹಾಡಿದರು. ಬಸವರಾಜ ಪಿ.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ವಾಲೀಕಾರ್ ಸ್ವಾಗತಿಸಿದರು. ಬಸವರಾಜ ಬಳಿಗಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.