ರಾಯಚೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ನಾಲ್ಕು ತಿಂಗಳು ಕಳೆದಿವೆ. ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದರು.
‘ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವುದು ಬಿಟ್ಟರೆ ಏನನ್ನೂ ಮಾಡುತ್ತಿಲ್ಲ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
‘ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಜಮೀನು ಕಳೆದುಕೊಳ್ಳಲಿರುವ ರೈತರಿಗೂ ತೃಪ್ತಿಕರವಾಗುವ ರೀತಿಯಲ್ಲಿ ಪರಿಹಾರ ಪ್ರಕಟಿಸಿದೆ. ಒಟ್ಟು 25 ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಆದರೆ, ಜಲಾಶಯದ ಎತ್ತರ ಹೆಚ್ಚಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಲ್ಲಿ ಮೀನಮೇಷ ಮಾಡುತ್ತಿದೆ’ ಎಂದು ಟೀಕಿಸಿದರು.
‘ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
‘ಯೋಜನೆ ಸ್ಥಗಿತ’: ‘ಅಂತರ್ಜಲಮಟ್ಟ ಹೆಚ್ಚಿಸಲು ಅಟಲ್ ಭೂಜಲ ಯೋಜನೆ ಅಡಿಯಲ್ಲಿ ಕೆರೆ, ಚೆಕ್‌ಡ್ಯಾಂ ಹಾಗೂ ಬ್ಯಾರೇಜ್ ನಿರ್ಮಾಣಕ್ಕೆ ಒತ್ತುಕೊಡಲಾಗಿತ್ತು. ಅತಿ ಹೆಚ್ಚು ಅಂತರ್ಜಲ ಕುಸಿತವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ದಿಢೀರ್ ಯೋಜನೆ ಸ್ಥಗಿತಗೊಳಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ’ ಎಂದರು.
‘ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲಮಟ್ಟ 1,500 ಅಡಿ ಆಳಕ್ಕೆ ಕುಸಿದಿತ್ತು. ಜಲ ಸಂರಕ್ಷಣೆ ಕಾರ್ಯಕ್ರಮದ ನಂತರ 150 ಅಡಿಯಲ್ಲಿ ನೀರು ಲಭಿಸುತ್ತಿದೆ. ರಾಜ್ಯದಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ಯೋಜನೆಗಳು ಮುಂದುವರಿಯಲಿವೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಿರಪುರ ತಾಲ್ಲೂಕು ಜಲ ಸಂರಕ್ಷಣಾ ಪ್ರಯತ್ನಗಳ ಮೂಲಕ ಅಭಿವೃದ್ಧಿ ಸಾಧಿಸಿದೆ. ಸೆ.23 ಹಾಗೂ 24ರಂದು ಶಾಸಕರನ್ನು ಅಧ್ಯಯನ ಪ್ರವಾಸ ಕರೆದೊಯ್ಯಲಾಗುತ್ತಿದೆ. ನಂತರ ರಾಜ್ಯದಲ್ಲೂ ಸಿರಪುರ ಮಾದರಿಯಲ್ಲಿ ಜಲ ಸಂರಕ್ಷಣಾ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
Highlights - ಮಲಿಯಾಬಾದ್ ಪ್ರವಾಸಿ ತಾಣಗಳ ಅಭಿವೃದ್ದಿಗೆ ಕ್ರಮ ಮಾವಿನಕೆರೆ ಉದ್ಯಾನ ಅಭಿವೃದ್ಧಿಗೆ ಒತ್ತು ವಿಜ್ಞಾನ ಕೇಂದ್ರ ಮೇಲ್ದರ್ಜೆಗೇರಿಸಲು ಕ್ರಮ
Quote - ಜಿಲ್ಲೆಯ ಹಳೆಯ ಯೋಜನೆಗಳಿಗೆ ಪುನಶ್ಚೇತನ ನೀಡಲಾಗುವುದು. ರಾಯಚೂರು ತಾಲ್ಲೂಕಿನ ಡಿ.ರಾಂಪುರ ಸಮೀಪ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಸಚಿವ
‘ಚತುಷ್ಪಥ ರಸ್ತೆ ನಿರ್ಮಾಣ’
‘ರಾಯಚೂರು ನಗರದ ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ₹ 25 ಕೋಟಿ ವೆಚ್ಚದಲ್ಲಿ ಹೊಸ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದು ಸಚಿವ ಬೋಸರಾಜು ತಿಳಿಸಿದರು. ‘ಈ ರಸ್ತೆ ಸಾರ್ವಜನಿಕರ ಓಡಾಟಕ್ಕೆ ಕಿರಿದಾಗಿದೆ. ರಸ್ತೆ ವಿಸ್ತರಣೆಗೊಳಿಸಿ ಚತುಷ್ಪಥ ರಸ್ತೆ ನಿರ್ಮಿಸಿ ವಾಹನ ಸಂಚಾರ ಸುಗಮಗೊಳಿಸಲಾಗುವುದು. ₹ 25 ಕೋಟಿಯಲ್ಲಿ ರಸ್ತೆ ನಿರ್ಮಾಣಕ್ಕೆ ₹ 20 ಕೋಟಿ ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆಗೆ ₹ 5 ಕೋಟಿ ವಿನಿಯೋಗಿಸಲಾಗುವುದು’ ಎಂದು ಹೇಳಿದರು. ‘ಮಾವಿನಕೆರೆ ಪಕ್ಕದ ಮೀನುಗಾರಿಕೆ ಇಲಾಖೆ ಕಚೇರಿ ಇರುವ 7 ಎಕರೆ ಜಾಗವನ್ನು ಮಹಾನಗರ ಪಾಲಿಕೆಗೆ ಕೊಡಲಾಗಿದೆ.
ಅಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗುವುದು. ತಾಲ್ಲೂಕಿನ ಮಲಿಯಾಬಾದ್‌ನಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ಕಾರ್ಮಿಕರ ಮಕ್ಕಳ ವಸತಿ ಶಾಲೆ ಹಾಗೂ 1 ಎಕರೆಯಲ್ಲಿ ಇಎಸ್‌ಐ ಆಸ್ಪತ್ರೆಯ ಡಿಸ್ಪೆನ್ಸರಿ ಮುಂದಿನ ದಿನಗಳಲ್ಲಿ 50 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.