ರಾಯಚೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಸಮೀಕ್ಷೆದಾರರಿಗೆ ಮೊದಲ ಮೂರು ದಿನ ಆ್ಯಪ್‌ನಲ್ಲಿ ತಾಂತ್ರಿಕ ದೋಷ ಹಾಗೂ ನೆಟ್‌ವರ್ಕ್ ಸಮಸ್ಯೆ ಎದುರಾದರೆ, ಶುಕ್ರವಾರ ನಿರಂತರವಾಗಿ ಸುರಿದ ಮಳೆ ತೊಡಕು ಉಂಟು ಮಾಡಿತು.
ರಾಯಚೂರು, ಲಿಂಗಸುಗೂರು ಹಾಗೂ ದೇವದುರ್ಗ ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಶುಕ್ರವಾರವೂ ನೆಟ್‌ವರ್ಕ್ ಸಮಸ್ಯೆ ಕಾಡಿತು. ಸರ್ಕಾರ ನಿಗದಿಪಡಿಸಿದಂತೆ 15 ದಿನಗಳಲ್ಲಿ ಸಮೀಕ್ಷೆ ಮುಗಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಮಧ್ಯಾಹ್ನ ಹಾಗೂ ಸಂಜೆ ಮಾಹಿತಿ ಪಡೆದುಕೊಳ್ಳಲಾರಂಭಿಸಿದೆ.
ಒಬ್ಬ ಸಮೀಕ್ಷೆದಾರನಿಗೆ 150 ಮನೆಗಳ ಸಮೀಕ್ಷೆಯ ಹೊಣೆ ವಹಿಸಲಾಗಿದೆ. ರೈತರು ಬೆಳಿಗ್ಗೆ ಎದ್ದು ಹೊಲಕ್ಕೆ ಹೋಗಿದ್ದರೆ ಮತ್ತೆ ಮರಳಿ ಬಂದು ಪರಿಶೀಲಿಸುತ್ತಿದ್ದಾರೆ. ಮನೆ ಮಾಲೀಕರು ಸಿಗದಿದ್ದರೆ ಮೇಲ್ವಿಚಾರಕರು ಬಂದು ಡೋರ್ ಲಾಕ್ ಎಂದು ದಾಖಲಿಸುತ್ತಿದ್ದಾರೆ.
‘5ಜಿ ಸಿಮ್ ಹಾಗೂ ಉತ್ತಮ ಮೊಬೈಲ್ ಹೊಂದಿದವರಿಗೆ ಹೆಚ್ಚು ಸಮಸ್ಯೆಯಾಗುತ್ತಿಲ್ಲ. ಹಳೆ ಮಾದರಿಯ ಮೊಬೈಲ್ ಹಾಗೂ 4ಜಿ ಸಿಮ್ ಹೊಂದಿದವರು ಸ್ವಲ್ಪ ಮಟ್ಟಿಗೆ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ನಗರದಲ್ಲಿ ಗಣತಿಕಾರ್ಯದಲ್ಲಿ ತೊಡಗಿದ ಸಮೀಕ್ಷಾದಾರರೊಬ್ಬರು ಪ್ರತಿಕ್ರಿಯಿಸಿದರು.
‘ರಾಯಚೂರು ಜಿಲ್ಲೆಯಲ್ಲಿ ನಿತ್ಯ 20 ಸಾವಿರ ಕುಟುಂಬಗಳ ಸಮೀಕ್ಷೆ ಆಗಬೇಕಿತ್ತು. ಮೊದಲ ದಿನ ಮಧ್ಯಾಹ್ನ ಕಿಟ್ ಕೊಡಲಾಗಿತ್ತು. ಎರಡು ಹಾಗೂ ಮೂರನೇ ದಿನ ಸಾಫ್ಟ್‌ವೇರ್ ಸಮಸ್ಯೆ ಎದುರಿಸಿದರು. ನಾಲ್ಕನೇ ದಿನ 2,221 ಕುಟುಂಬಗಳ ನೋಂದಣಿ ಸಾಧ್ಯವಾಗಿತ್ತು. ಶುಕ್ರವಾರ 8,553 ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.
‘ಸಾಫ್ಟ್‌ವೇರ್ ಸಮಸ್ಯೆ ಇರುವುದನ್ನು ಬೆಂಗಳೂರಿನ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಹೀಗಾಗಿ ಶುಕ್ರವಾರ ಸಾಫ್ಟ್‌ವೇರ್ ಸಮಸ್ಯೆ ಕಂಡುಬಂದಿಲ್ಲ. ಆದರೆ, ಸಮೀಕ್ಷೆಗೆ ಸ್ವಲ್ಪ ಮಟ್ಟಿಗೆ ಮಳೆ ತೊಡಕು ಉಂಟು ಮಾಡಿತು’ ಎಂದು ಹೇಳಿದರು.
ಮಳೆಯಿಂದಾಗಿ ಕೊಡೆ ಹಿಡಿದು ಸಾಗಿದ ಸಮೀಕ್ಷೆದಾರರು ಹೊಲಗಳಲ್ಲಿನ ಮನೆಗಳಿಗೆ ತೆರಳಲು ಪ್ರಯಾಸ ಹಿರಿಯ ಅಧಿಕಾರಿಗಳಿಂದ ನಿರಂತರ ಮೇಲ್ವಿಚಾರಣೆ
ಪ್ರಶ್ನೆಗಳಿಂದ ಮುಜುಗರ ಸಮೀಕ್ಷೆಯಲ್ಲಿ ಕೇಳುವ ಕೆಲ ಪ್ರಶ್ನೆಗಳು ಮುಜುಗರಕ್ಕೆ ಕಾರಣವಾಗುತ್ತಿವೆ. ಹೊಲ ಮನೆ ದ್ವಿಚಕ್ರವಾಹನ ಟ್ರ್ಯಾಕ್ಟರ್ ಕಾರು ಚಿನ್ನಾಭರಣದ ಮಾಹಿತಿಯನ್ನೂ ಕೇಳುತ್ತಿರುವ ಕಾರಣ ಕುಟುಂಬದ ಮುಖ್ಯಸ್ಥರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕಾರು ಟ್ರ್ಯಾಕ್ಟರ್ ಹೊಂದಿದವರು ಜಮೀನ್ದಾದರರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಬೆಳಕಿಗೆ ಬರುತ್ತಿದೆ. ಒಂದೇ ಚಿಕ್ಕ ಮನೆ ಇದ್ದರೂ ಮೂರು ಕುಟುಂಬಗಳಿರುವುದನ್ನು ಉಲ್ಲೇಖಿಸಿ ಮೂರು ಬಿಪಿಎಲ್ ಕಾರ್ಡ್‌ಗಳು ಪಡೆದಿರುವುದು ಸಹ ಬಯಲಿಗೆ ಬಂದಿದೆ. ‘ಮದುವೆಯಾದಾಗಿನ ವಯಸ್ಸು ಎಷ್ಟು ಎನ್ನುವ ಪ್ರಶ್ನೆಗೂ ಅನುಮಾನದಿಂದ ಉತ್ತರಿಸುತ್ತಿದ್ದಾರೆ. ಮಹಿಳೆಯರು 18 ಎಂದು ಉಲ್ಲೇಖಿಸಿದರೂ ಮಕ್ಕಳ ವಯಸ್ಸಿಗೂ ಅವರ ವಯಸ್ಸಿಗೂ ವ್ಯತ್ಯಾಸ ಕಂಡು ಬರುತ್ತಿದೆ. ಸಮೀಕ್ಷೆದಾರರು ಕುಟುಂಬದ ಮುಖ್ಯಸ್ಥರು ಕೊಡುವ ಹೇಳಿಕೆಗಳನ್ನು ದಾಖಲಿಸಿಕೊಂಡು ಬರುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ವಾಸವಾಗಿರುವ ಹಳ್ಳಿಗಳಲ್ಲಿ ಮಾಹಿತಿ ದಾಖಲು ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ’ ಎಂದು ಹೆಸರು ಹೇಳಲಿಚ್ಚಿಸಿದ ಸಮೀಕ್ಷೆದಾರರೊಬ್ಬರು ತಿಳಿಸಿದರು.
ಸಮೀಕ್ಷೆಗೆ 3586 ಸಿಬ್ಬಂದಿ ಜಿಲ್ಲೆಯಲ್ಲಿ ಸೆ.22ರಿಂದ ಆರಂಭವಾದ ಸಮೀಕ್ಷೆಗೆ ಒಟ್ಟು 3178 ಶಿಕ್ಷಕರು ಸೇರಿ ಒಟ್ಟು 3586 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರೇ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಒಬ್ಬ ಶಿಕ್ಷಕನಿಗೆ 150 ಮನೆಗಳಿಗೆ ಒಂದು ವಲಯ ಮಾಡಿ ಹತ್ತು ವಲಯಗಳಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸುಮಾರು 60 ಅಂಶಗಳ ಸಮೀಕ್ಷೆ ಮಾಡಲು 3178 ಜನ ಶಿಕ್ಷಕರು ಸಮೀಕ್ಷೆದಾರರು 340 ಮೇಲ್ವಿಚಾರಕರು 68 ಜನ ಮಾಸ್ಟರ್ ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.