ADVERTISEMENT

ಹದಗೆಟ್ಟ ನಗರ: ಸ್ಪಂದಿಸುವ ವ್ಯವಸ್ಥೆಯಿಲ್ಲ

ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ ರಾಯಚೂರು ನಗರಸಭೆ

ನಾಗರಾಜ ಚಿನಗುಂಡಿ
Published 27 ಜೂನ್ 2020, 19:30 IST
Last Updated 27 ಜೂನ್ 2020, 19:30 IST
ರಾಯಚೂರು ನಗರದ ಇನ್‌ಫೆಂಟ್‌ ಜೀಸ್‌ ಕಾಲೇಜು ಪಕ್ಕದ ರಸ್ತೆಯು ಶುಕ್ರವಾರ ಸುರಿದ ಮಳೆಯಿಂದ ಕೆರೆಯಂತಾಗಿದ್ದು, ಜನಸಂಚಾರ, ವಾಹನ ಸಂಚಾರ ಸಂಕಷ್ಟಮಯವಾಗಿದೆ
ರಾಯಚೂರು ನಗರದ ಇನ್‌ಫೆಂಟ್‌ ಜೀಸ್‌ ಕಾಲೇಜು ಪಕ್ಕದ ರಸ್ತೆಯು ಶುಕ್ರವಾರ ಸುರಿದ ಮಳೆಯಿಂದ ಕೆರೆಯಂತಾಗಿದ್ದು, ಜನಸಂಚಾರ, ವಾಹನ ಸಂಚಾರ ಸಂಕಷ್ಟಮಯವಾಗಿದೆ   

ರಾಯಚೂರು: ನಗರದ ರಸ್ತೆಗಳ ಸ್ಥಿತಿ ಅಧೋಗತಿಯಾಗಿ ಹಲವು ವರ್ಷಗಳಾಗಿದೆ. ಈಗ ಮಳೆಗಾಲದಲ್ಲಿ ಕೆಲವು ಮಾರ್ಗಗಳಲ್ಲಿ ಸಂಚರಿಸುವುದು ಅಸಾಧ್ಯವಾಗಿ ಪರಿಣಿಮಿಸಿದರೂ, ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಮಸ್ಯೆಗಳತ್ತ ದಿವ್ಯಮೌನ ವಹಿಸಿದ್ದಾರೆ!

ಅವ್ಯವಸ್ಥೆ ಮತ್ತು ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಬರೀ ಬಾಯಿಮಾತಿನಲ್ಲೇ ಪರಿಹಾರ ಒದಗಿಸುತ್ತಾ ಬರಲಾಗಿದೆ. ಭರವಸೆಯನ್ನು ನಂಬಿ ಕುಳಿತಿದ್ದ ಜನರು, ಆಡಳಿತ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ಕೆಲಸ ಮಾಡಿಸುತ್ತಿಲ್ಲ ಎನ್ನುವ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಸಣ್ಣ ಪ್ರಮಾಣದ ಮಳೆಯಾದರೆ ಸಾಕು; ನಗರ ವ್ಯಾಪ್ತಿಯ ಬಹಳಷ್ಟು ರಸ್ತೆಗಳ ಸ್ವರೂಪವೇ ಬದಲಾಗುತ್ತಿದೆ. ಎಸ್‌ಪಿ ಕಚೇರಿ ಎದುರಿನಿಂದ ಎಲ್‌ಬಿಎಸ್‌ ನಗರ ಸಂಪರ್ಕಿಸುವ ಮಾರ್ಗ, ಟಿಪ್ಪು ಸುಲ್ತಾನ ರಸ್ತೆ, ಇನ್‌ಫೆಂಟ್‌ ಜೀಸಸ್‌ ಶಾಲೆ ಎದುರಿನ ರಸ್ತೆಗಳು ಅಕ್ಷರಶಃ ಸಂಚಲನವಿಲ್ಲದ ಕಾಲುವೆಯಾಗುತ್ತವೆ. ನಗರದ ವ್ಯಾಪ್ತಿಯಲ್ಲಿರುವ ಹೊಸೂರ, ರಾಂಪುರ, ಅಸ್ಕಿಹಾಳ ಸಂಪರ್ಕಿಸುವ ಕೆಲವು ಮಾರ್ಗಗಳು ಕೆಸರುಗದ್ದೆಗಳಾಗಿ ಮಾರ್ಪಡುತ್ತಿವೆ.

ADVERTISEMENT

ಆಶಾಪುರ ಮಾರ್ಗದಲ್ಲಿ ಎಫ್‌ಸಿಐ ಗೋದಾಮಿನಿಂದ ಕೇಂದ್ರೀಯ ವಿದ್ಯಾಲಯವರೆಗಿನ ಮಾರ್ಗದಲ್ಲಿ ಅಲ್ಲಲ್ಲಿ ನೀರಿನ ತೊಟ್ಟಿಗಳು ಕಾಣುತ್ತವೆ. ಗುಡ್ಡದ ಇಳಿಜಾರಿನಿಂದ ಬರುವ ಮಳೆನೀರು ಹರಿಯುವುದಕ್ಕೆಚರಂಡಿಗಳಿಲ್ಲ. ಹೀಗಾಗಿ ಅಲ್ಲಲ್ಲಿ ರಸ್ತೆ ಕೊಚ್ಚಿಹೋಗುತ್ತಿದೆ. ತಗ್ಗುಗುಂಡಿಗಳನ್ನು ವೈಜ್ಞಾನಿಕವಾಗಿ ದುರಸ್ತಿ ಮಾಡುತ್ತಿಲ್ಲ. ಇದರಿಂದ ವಾಹನಗಳು ಮತ್ತು ಜನಸಂಚಾರ ಸಂಕಷ್ಟದಿಂದ ಕೂಡಿದೆ.

ನೂರಾರು ಕೋಟಿ: ನಗರದಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಒದಗಿಸಲು ನೂರಾರು ಕೋಟಿ ಅನುದಾನ ಒದಗಿಸಲಾಗಿದೆ. ಎರಡೂ ಯೋಜನೆಗಳು ಪೂರ್ಣವಾಗಿಲ್ಲ. ಆದರೆ, ಯೋಜನೆಗಳ ಅನುಷ್ಠಾನಕ್ಕಾಗಿ ಎಲ್ಲೆಡೆಯಲ್ಲೂ ರಸ್ತೆಗಳನ್ನು ಅಗೆದುಹಾಕಲಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಮಾಡಬೇಕಿದ್ದ ಜನಪ್ರತಿನಿಧಿಗಳು ಕೂಡಾ ಜನಸಾಮಾನ್ಯರಂತೆಯೆ ಉಳಿದಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.