ರಾಯಚೂರು: ರಾಜ್ಯದ ಹಳೆಯ ಜಿಲ್ಲೆಯಾದರೂ ರಾಯಚೂರು ಮಹಾನಗರ ಎಳ್ಳಷ್ಟೂ ಸುಧಾರಿಸಿಲ್ಲ. ರಸ್ತೆ ಬದಿಗೆ ತುಂಬಿದ ಕಸ, ಗಬ್ಬು ನಾಥ, ಹಳೆಯ ನಗರ ಅಷ್ಟೇ ಅಲ್ಲ. ಬಡಾವಣೆಗಳಲ್ಲೂ ಸರಿಯಾದ ಗಟಾರುಗಳಿಲ್ಲ. ಸ್ವಲ್ಪ ಮಳೆಯಾದರೂ ಸಾಕು ನಗರದ ರಸ್ತೆಗಳು ಜಲಾವೃತಗೊಳ್ಳುತ್ತವೆ.
ಹಿಂದೆ ಕಮಿಷನ್ ದಂದೆ ಮಹಾನಗರದ ವ್ಯವಸ್ಥೆಯನ್ನೇ ಹಾಳುಗೆಡವಿದೆ. ಗುತ್ತಿಗೆ ಪಡೆದವರು ಗಟಾರಲ್ಲಿ ನೀರು ಹರಿದು ಹೋಗುವಂತೆ ಕಾಮಗಾರಿಯನ್ನೇ ಮಾಡಿಲ್ಲ. ಅವೈಜ್ಞಾನಿಕವಾಗಿ ಕಟ್ಟೆಕಟ್ಟಿ ಬಿಲ್ ಎತ್ತಿಕೊಂಡು ಹೋಗಿದ್ದಾರೆ. ಹೀಗಾಗಿ ಜನರ ಸಮಸ್ಯೆ ಮಾತ್ರ ಇಂದಿಗೂ ನಿವಾರಣೆಯಾಗಿಲ್ಲ.
ಹಳೆಯನಗರದಲ್ಲಿ ಅತಿಕ್ರಮಣ ನಗರದೊಳಗಿನ ನೀರು ಹೊರಗೆ ಹೋಗದಂತೆ ಮಾಡಿದೆ. ಮಾರುಕಟ್ಟೆಯಲ್ಲಿನ ಅಂಗಡಿಗಳ ಮಾಲೀಕರು ಸ್ವಚ್ಚತೆಗೆ ಸಹಕರಿಸುತ್ತಿಲ್ಲ. ರಾತ್ರಿ ಅಂಗಡಿಗಳನ್ನು ಬಂದ್ ಮಾಡಿದ ನಂತರ ಗಟಾರುಗಳಲ್ಲಿ ಕಸ ಸುರಿದು ಹೋಗುತ್ತಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ.
ಪ್ರತಿಷ್ಠಿತರ ಬಡಾವಣೆಗಳೂ ಸ್ವಚ್ಛವಾಗಿಲ್ಲ. ಕತ್ತಲಾದ ತಕ್ಷಣ ರಸೆ ಬದಿಗೆ ಮನೆಯ ಕಸ, ಮುಸುರೆ ಸುರಿದು ಹೋಗುವ ಪ್ರವೃತ್ತಿ ನಿಂತಿಲ್ಲ. ನಿಜಲಿಂಗಪ್ಪ ಕಾಲೊನಿ, ಡ್ಯಾಡಿ ಕಾಲೊನಿ, ಬಸವಕಾಲೊನಿ, ಆಜಾದ್‌ನಗರ, ವಾಸವಿನಗರದಲ್ಲಿ ಸರಿಯಾದ ಗಟಾರುಗಳು ಇಲ್ಲ. ಮಳೆ ಬಂದಾಗ ನೀರು ರಸ್ತೆ ಮೇಲೆಯೇ ನಿಂತುಕೊಳ್ಳುತ್ತದೆ.
ನಿಜಲಿಂಗಪ್ಪ ಕಾಲೊನಿ, ಆಜಾದ್‌ನಗರದಲ್ಲಿ ಮಳೆ ಬಂದು ಹೋಗಿ 15 ದಿನಗಳಾದರೂ ರಸ್ತೆ ಮೇಲಿನ ರಸ್ತೆ ಮೇಲಿನ ನೀರು ಹರಿದು ಹೋಗುವುದಿಲ್ಲ.ನೀರು ಹರಿದು ಹೋಗುವಂತೆ ಹೇಗೆ ಮಾಡಬೇಕು ಎನ್ನುವುದು ಮಹನಗರಪಾಲಿಕೆಯ ಅಧಿಕಾರಿಗಳಿಗ ಯಕ್ಷ ಪ್ರಶ್ನೆಯಾಗಿದೆ.
ಜಿಲ್ಲಾಧಿಕಾರಿ ಅಧಿಕೃತ ನಿವಾಸದ ಬಳಿ ಲಿಂಗಸುಗೂರು ರಸ್ತೆಯಲ್ಲೂ ಮಳೆಯ ನೀರು ನಿಲ್ಲುತ್ತದೆ, ಸರ್ಕಾರಿ ಮಹಿಳಾ ಪದವಿ ಕಾಲೇಜು ರಸ್ತೆಯಲ್ಲೂ ಕೊಳಚೆ ನೀರು ನಿಂತುಕೊಳ್ಳುತ್ತದೆ. ಎಲ್‌ಬಿಎಸ್‌ನಗರದ ಕೆಲ ಕಡೆ ಇಂತಹದ್ದೇ ಸ್ಥಿತಿ ಇದೆ. ಕೊಳೆ ನೀರು ಜನರ ಬದುಕನ್ನು ಅಸಹನೀಯಗೊಳಿಸಿದೆ.
ವಿದ್ಯಾಭಾರತಿ ಶಾಲೆ ಕಡೆಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಕೆಳ ಸೇತುವೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬೇಸಿಗೆಯಲ್ಲಿ ಗಟಾರು ತುಂಬಿಕೊಂಡು ನಿಂತಿರುತ್ತದೆ. ಮಳೆಗಾಲದಲ್ಲಿ ಈ ಮಾರ್ಗವಾಗಿ ಸಾರ್ವಜನಿಕರು, ಶಿಕ್ಷಕರು ವಿದ್ಯಾರ್ಥಿಗಳು ಸಂಚರಿಸುವುದು ಕಷ್ಟವಾಗುತ್ತದೆ.
‘ಮಳೆಗಾಲದಲ್ಲಿ ರೈಲ್ವೆ ಕೆಳ ಸೇತುವೆ ಮಾರ್ಗವಾಗಿ ಶಾಲೆಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಅಲ್ಲಿ ಮೊಣಕಾಲು ವರೆಗೆ ನೀರು ನಿಲ್ಲುತ್ತದೆ. ನೀರಿನಲ್ಲೇ ನಡೆದುಕೊಂಡು ಶಾಲೆಗೆ ಹೋಗಬೇಕಾಗುತ್ತದೆ. ಶೂ ಒಳಗೆ ನೀರು ಹೋಗುತ್ತದೆ. ಕೊಳಚೆ ನೀರು ತಾಗಿ ಚರ್ಮದ ಮೇಲೆ ಗುಳ್ಳೆಗಳು ಆಗುತ್ತಿವೆ‘ ಎಂದು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಸವಿತಾ ಹಾಗೂ ವಿದ್ಯಾ ಸಮಸ್ಯೆ ವಿವರಿಸುತ್ತಾರೆ.
‘ಮಹಾನಗರದ ಅಭಿವೃದ್ಧಿಗೆ ಸರ್ಕಾರ ₹200 ಕೋಟಿ ಒದಗಿಸಿದೆ. ಆದ್ಯತೆ ಮೇಲೆ ಗಟಾರು ನಿರ್ಮಿಸಲಾಗುವುದು. ಗಟಾರದಲ್ಲಿ ಕಸ ಎಸೆದರೆ ನೀರು ಹರಿದು ಹೋಗುವುದಿಲ್ಲ. ನಗರದಲ್ಲಿ ನೈರ್ಮಲ್ಯ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು‘ ಎಂದು ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳುತ್ತಾರೆ.
ಘನತ್ಯಾಜ್ಯ ಸಂಗ್ರಹಿಸುವ ಪೌರ ಕಾರ್ಮಿಕರ ವಾಹನ ನಿತ್ಯ ಪ್ರತಿಯೊಂದು ಕಾಲೊನಿಗೆ ಬರಬೇಕು. ಇದರಿಂದ ಗಟಾರಲ್ಲಿ ಕಸ ಎಸೆಯುವುದು ನಿಲ್ಲಲಿದೆ.ಹಫಿಜುಲ್ಲಾ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.