ADVERTISEMENT

ರಾಯಚೂರು:ಸಮಸ್ಯೆಗೆ ಸ್ಪಂದಿಸುವ ಕುಂದುಕೊರತೆ ವಿಭಾಗ

ಮಹಾನಗರ ಪಾಲಿಕೆ: ಒಂದೂವರೆ ತಿಂಗಳಲ್ಲಿ ಫೋನ್ ಕರೆಗಳ ಮೂಲಕ 250 ದೂರು ಸ್ವೀಕಾರ

ಚಂದ್ರಕಾಂತ ಮಸಾನಿ
Published 6 ನವೆಂಬರ್ 2025, 7:54 IST
Last Updated 6 ನವೆಂಬರ್ 2025, 7:54 IST
ರಾಯಚೂರಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ
ರಾಯಚೂರಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ   

ರಾಯಚೂರು: ಮಹಾನಗರ ಪಾಲಿಕೆಯು ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಕುಂದುಕೊರತೆ ವಿಭಾಗಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಆಡಳಿತ ವ್ಯವಸ್ಥೆಯನ್ನು ಬಿಗಿಗೊಳಿಸಿದ ನಂತರ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕಲಾರಂಭಿಸಿದೆ.

ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ ನೀಡುವ ದೂರುಗಳನ್ನು ಸಹ ದಾಖಲಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ಒತ್ತು ಕೊಡಲಾಗಿದೆ. ದಾರಿ ದೀಪಗಳು, ಕಸ ವಿಲೇವಾರಿ, ಬೀದಿ ನಾಯಿಗಳ ಹಾವಳಿ ಹಾಗೂ ರಸ್ತೆ ಮಧ್ಯೆ ಬಿದ್ದಿರುವ ಹೊಂಡಗಳನ್ನು ಮುಚ್ಚುವಂತೆ ಕೋರುವ ಮನವಿಗೂ ಪಾಲಿಕೆ ಸ್ಪಂದಿಸುತ್ತಿದೆ.

ADVERTISEMENT

2025ರ ಸೆಪ್ಟೆಂಬರ್ 18ರಂದು ಕಾರ್ಯಾರಂಭ ಮಾಡಿರುವ ಕುಂದುಕೊರತೆ ವಿಭಾಗವು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿದೆ. ಇದೀಗ ಸಾರ್ವಜನಿಕರು ಲಿಖಿತ ದೂರುಗಳನ್ನು ಸಹ ಸ್ಥಳಕ್ಕೆ ಬಂದು ಕೊಡಲು ಆರಂಭಿಸಿದ್ದಾರೆ.

‘45 ದಿನಗಳ ಅವಧಿಯಲ್ಲಿ 250 ಫೋನ್‌ ಕರೆಗಳ ಮೂಲಕ ಬಂದಿರುವ ದೂರುಗಳನ್ನು ಸ್ವೀಕರಿಸಲಾಗಿದೆ. ಬೀದಿ ನಾಯಿಗಳ ಹಾವಳಿ ತಡೆ, ಒಳ ಚರಂಡಿ, ನೀರಿನ ಸಮಸ್ಯೆ, ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿ ಹೆಚ್ಚಿನ ಕರೆಗಳು ಬಂದಿವೆ’ ಎಂದು ಕುಂದುಕೊರತೆ ವಿಭಾಗದ ಮುಖ್ಯಸ್ಥ ಬಾವಾಖಾನ್ ತಿಳಿಸಿದರು.

ಸಾರ್ವಜನಿಕರಿಂದ ದೂರುಗಳು ಬಂದ ನಂತರ ಗಂಜ್‌ ಸರ್ಕಲ್, ಸಿಯಾತಾಲಾಬ್, ಎಲ್‌ಬಿಎಸ್‌ ನಗರದಲ್ಲಿನ ರಸ್ತೆಯಲ್ಲಿ ತಗ್ಗು–ಗುಂಡಿಗಳನ್ನು ಮುಚ್ಚಲಾಗಿದೆ. ಬೀದಿ ನಾಯಿಗಳನ್ನು ಹಿಡಿಯುವ ಹೊಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಅವರು ನಿತ್ಯ ಸರಾಸರಿ 20 ನಾಯಿಗಳನ್ನು ಹಿಡಿಯುತ್ತಿದ್ದಾರೆ.

‘ನಗರದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಿದ ಕಾರಣ ಜಾನುವಾರು ಮಾಲೀಕರಿಗೆ ಅನೇಕ ಬಾರಿ ತಮ್ಮ ಮನೆಯ ಕೊಟ್ಟಿಗೆಗಳಲ್ಲಿ ಜಾನುವಾರಗುಳನ್ನು ಕಟ್ಟಿಕೊಳ್ಳುವಂತೆ ಮಾನವಿ ಮಾಡಲಾಗಿದೆ. ಆದರೆ, ಮಾಲೀಕರು ಸ್ಪಂದಿಸುತ್ತಿಲ್ಲ. ಹೀಗಾಗಿ 150 ಬಿಡಾಡಿ ದನಗಳನ್ನು ಹಿಡಿಲಾಗಿತ್ತು. ಅದರಲ್ಲಿ 55 ದನಗಳ ಮಾಲೀಕರಿಗೆ ದಂಡ ವಿಧಿಸಿ ಮರಳಿಸಲಾಗಿದೆ. ಉಳಿದ ಜಾನುವಾರುಗಳನ್ನು ಕಲಬುರಗಿಯ ಗೋಶಾಲೆಗೆ ಕಳುಹಿಸಿಕೊಡಲಾಗಿದೆ’ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದರು.

‘ಸಾರ್ವಜನಿಕರಿಂದ ದೂರು ಬಂದ ಮೂರು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಕೋಪನ್‌ ಸಿದ್ಧಪಡಿಸಲಾಗಿದೆ. ದೂರುದಾರರ ಹೆಸರು, ಪ್ರದೇಶ ಉಲ್ಲೇಖಿಸಿ ಸಂಬಂಧಪಟ್ಟ ಅಧಿಕಾರಿಗೆ ಕಳಿಸಲಾಗುತ್ತಿದೆ. ಕೆಲಸ ಪೂರ್ಣ ಮಾಡಿದ ನಂತರ ಅವರು ಹಿಂಬರಹ ಬರೆದು ಮರಳಿ ಕೊಡಬೇಕು. ನಂತರ ದೂರುದಾರರಿಗೂ ಕರೆ ಮಾಡಿ ತಿಳಿಸಲಾಗುತ್ತಿದೆ’ ಎಂದು ವಿವರಿಸಿದರು.

‘ನಿರೀಕ್ಷಕರು ಹಾಗೂ ಮೇಲ್ವಿಚಾರಕು ನಿತ್ಯ ಕೆಲಸ ಮಾಡಿದ ಸ್ಥಳದಲ್ಲಿನ ಮೊದಲಿನ ಸ್ಥಿತಿ, ಕೆಲಸ ಮುಗಿದ ನಂತರ ಫೋಟೊ ತೆಗೆದು ಕಳಿಸಬೇಕು. ಪ್ರತಿಯೊಂದು ದೂರು ದಾಖಲಾಗುವ ಕಾರಣ ಕೆಲಸದಲ್ಲಿ ದಕ್ಷತೆ ಹೆಚ್ಚಿದೆ. ಪಾಲಿಕೆ ಸಿಬ್ಬಂದಿ ಕೆಲಸದಿಂದ ತಪ್ಪಿಸಿಕೊಳ್ಳುವ ಪಶ್ನೆಯೇ ಉದ್ಭವಿಸುತ್ತಿಲ್ಲ’ ಎಂದು ತಿಳಿಸಿದರು.

‘ಜನನ–ಮರಣ ದಾಖಲೆ ಮಾಡಲು ಸಮಸ್ಯೆಯಾದರೂ ಕುಂದುಕೊರತೆ ವಿಭಾಗದ ಮೂಲಕ ಪರಿಶೀಲಿಸಲಾಗುತ್ತಿದೆ. ಪಾಲಿಕೆ ಆಡಳಿತವನ್ನು ಜನಸ್ನೇಹಿಗೊಳಿಸುವ ದಿಸೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಹೇಳಿದರು.

ರಾಯಚೂರು ನಗರದಲ್ಲಿ ರಸ್ತೆಯಲ್ಲಿನ ಗುಂಡಿ ಮುಚ್ಚಿ ಡಾಂಬರು ಹಾಕಿದ ಪಾಲಿಕೆ ಸಿಬ್ಬಂದಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮೂಲಸೌಕರ್ಯಗಳ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡಲು ಕುಂದುಕೊರತೆ ವಿಭಾಗ ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು
ಜುಬಿನ್ ಮೊಹಾಪಾತ್ರ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.