ADVERTISEMENT

ಮಾವಿನಕೆರೆ ಒತ್ತುವರಿ ತೆರವಿಗೆ ಕ್ರಮವಹಿಸಿ: ಡಿಸಿ ಸೂಚನೆ

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 13:23 IST
Last Updated 15 ಸೆಪ್ಟೆಂಬರ್ 2022, 13:23 IST
ಎಲ್‌.ಚಂದ್ರಶೇಖರ್‌ ನಾಯಕ
ಎಲ್‌.ಚಂದ್ರಶೇಖರ್‌ ನಾಯಕ   

ರಾಯಚೂರು: ನಗರದಲ್ಲಿರುವ ಮಾವಿನಕೆರೆ ಒತ್ತುವರಿ ಸರ್ವೇಕಾರ್ಯ ಮಾಡಲಾಗಿದ್ದು, ಒತ್ತುವರಿಗಳನ್ನು ತೆರವುಗೊಳಿಸುವ ಕೆಲಸ ಆರಂಭಿಸಬೇಕು ಎಂದು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಾವಿನಕೆರೆ ಅಭಿವೃದ್ಧಿ ಕುರಿತಾದ ಸಭೆಯಲ್ಲಿ ಮಾತನಾಡಿದರು.

ಕೆರೆ ಅಭಿವೃದ್ಧಿಗಾಗಿ ಮೀಸಲಿರುವ ₹9 ಕೋಟಿ ಅನುದಾನ ವೆಚ್ಚಕ್ಕಾಗಿ ಕ್ರಿಯಾಯೋಜನೆ ಮತ್ತು ಮಾದರಿ ನೀಲನಕ್ಷೆಯೊಂದನ್ನು ಕೂಡಲೇ ಸಿದ್ಧಪಡಿಸಬೇಕು. ಮೊದಲ ಹಂತದಲ್ಲಿ ಮಾಡುವ ಕಾರ್ಯವನ್ನು ತುರ್ತಾಗಿ ಆರಂಭಿಸಬೇಕು ಎಂದು ತಿಳಿಸಿದರು.

ADVERTISEMENT

ಕೆರೆ ಪ್ರವೇಶಕ್ಕೆ ಮೂರು ಭಾಗಗಳಲ್ಲಿ ಪ್ರವೇಶದ್ವಾರಗಳು, ವಿದ್ಯುತ್‌ ದೀಪಗಳು ಮತ್ತು ಆಕರ್ಷಕವಾಗುವ ರೀತಿಯಲ್ಲಿ ಏನುಬೇಕು ಎಂಬುದನ್ನು ನೀಲನಕ್ಷೆಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಈ ಬಗ್ಗೆ ಪ್ರಾತ್ಯಕ್ಷಿಕೆ ಸಿದ್ಧಪಡಿಸಿ ವಿವರಿಸಬೇಕು ಎಂದು ಹೇಳಿದರು.

ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಒಟ್ಟಾಗಿ ಮುಂದಿನ 15 ದಿನಗಳಲ್ಲಿ ಕೆರೆ ಒತ್ತುವರಿ ಮತ್ತು ಹದ್ದುಬಸ್ತು ಮಾಹಿತಿ ನೀಡಬೇಕು. ಅಲ್ಲದೆ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಒಟ್ಟಾಗಿಯೇ ಮಾಡಬೇಕು ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರಿ ಆಯುಕ್ತ ಜಯಪಾಲರೆಡ್ಡಿ ಮಾತನಾಡಿ, ಮಾವಿನಕೆರೆ ಉದ್ಯಾನವನದಿಂದ ಪ್ರತಿವರ್ಷ ಒಂದು ಕೋಟಿ ಶುಲ್ಕ ಸಂಗ್ರಹವಾಗುತ್ತಿದೆ. ಈ ಶುಲ್ಕವನ್ನು ಉದ್ಯಾನವನದ ನಿರ್ವಹಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಹೇಂದ್ರಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಫಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.