ADVERTISEMENT

ಖಾಸಗಿ ಆಸ್ಪತ್ರೆಗೂ ಆಮ್ಲಜನಕ ಪೂರೈಕೆಗೆ ಕ್ರಮ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಮೇ 2021, 7:58 IST
Last Updated 6 ಮೇ 2021, 7:58 IST
 ಆರ್.ವೆಂಕಟೇಶಕುಮಾರ್
ಆರ್.ವೆಂಕಟೇಶಕುಮಾರ್   

ರಾಯಚೂರು: ‘ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಆಗುವುದನ್ನು ನಿಲ್ಲಿಸಿಲ್ಲ. ಆದರೆ ನವೋದಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಆಮ್ಲಜನಕ ಪೂರೈಕೆಯಾಗುತ್ತಿದ್ದ ಕೇಂದ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿದ್ದರಿಂದ ಆಮ್ಲಜನಕ ಕೊರತೆಯಾಗಿದೆ ಎಂದು ಸುದ್ದಿ ಹರಡಿದೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

‘ಆಮ್ಲಜನಕ ಕೊರತೆ ಇದೆ ಎಂದು ಗೊತ್ತಾಗುತ್ತಿದ್ದಂತೆ 50 ಸಿಲಿಂಡರ್ ಕಳುಹಸಲಾಗಿದೆ. ಇದೀಗ ನವೋದಯ ಆಸ್ಪತ್ರೆಗೆ ಆಮ್ಲಜನಕ ಒದಗಿಸುತ್ತಿದ್ದ ಎಂಎಸ್ ಪಿಎಲ್ ಕಾರ್ಖಾನೆಯಲ್ಲೂ ತಾಂತ್ರಿಕ ಸಮಸ್ಯೆ ಪರಿಹಾರವಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆ ಬಗ್ಗೆ ‌ಪ್ರತಿದಿನ ‌ವರದಿ ಸಲ್ಲಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಸ್ಥಳೀಯವಾಗಿ ಮೂರು ಫ್ಯಾಕ್ಟರಿಗಳಿಂದ ಆಮ್ಲಜನಕ ಪೂರೈಕೆ ಆಗುತ್ತಿದೆ. ಮುನ್ನಚ್ಚರಿಕೆ ವಹಿಸಿ ಬಳ್ಳಾರಿಯಿಂದ ಒಂದು ಆಮ್ಲಜನಕ ಟ್ಯಾಂಕರ್ ತರಿಸಿಕೊಳ್ಳಲಾಗಿದೆ. ಸದ್ಯಕ್ಕೆ ಆಮ್ಲಜನಕದ ಸಮಸ್ಯೆಯಿಲ್ಲ’ ಎಂದು ಹೇಳಿದರು.

ರವಿ ಬೋಸರಾಜ ವಶಕ್ಕೆ ಪಡೆದ ಪೊಲೀಸರು
ರಾಯಚೂರು:
ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದಲ್ಲಿ ಗುರುವಾರ ಬೆಳಿಗ್ಗೆ ಯಿಂದ ಧರಣಿ ಆರಂಭಿಸಿದ್ದ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ ಅವರನ್ನು ಪೊಲೀಸರು ಮಧ್ಯಾಹ್ನ ವಶಕ್ಕೆ ತೆಗೆದುಕೊಂಡು ಬಸ್ ನಲ್ಲಿ ಕರೆದೊಯ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿದ್ದು ಕೋವಿಡ್ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಬೇಕು. ಕೋವಿಡ್ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ನನ್ನನ್ನು ಬಂಧನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT