
ರಾಯಚೂರು: ‘ಆಯಾ ಕಾಲದಲ್ಲಿ ಆಗುವ ಬದಲಾವಣೆಗೆ ಹೊಂದಿಕೊಳ್ಳಬೇಕು. ಪ್ರೆಸ್ ಗೀಲ್ಡ್ ಕಟ್ಟಡ ಆಧುನೀಕರಣಗೊಂಡು ಸುಸಜ್ಜಿತವಾಗಬೇಕು. ಇದರಂತೆ ರಾಯಚೂರು ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿದರೆ ಬದಲಾವಣೆ ತರಲು ಸಾಧ್ಯವಿದೆ‘ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.
₹ 10 ಲಕ್ಷ ವೆಚ್ಚದಲ್ಲಿ ನಗರದ ಪ್ರೆಸ್ ಗೀಲ್ಡ್ ಕಟ್ಟಡದ ಆಧುನೀಕರಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ನಗರಕ್ಕೆ ಮೂಲ ಸೌಕರ್ಯ ಒದಗಿಸುವ ದಿಸೆಯಲ್ಲಿ ಜನಪ್ರತಿನಿಧಿಗಳು ಒಬ್ಬರೊಬ್ಬರು ಒಂದೊಂದು ಅಭಿವೃದ್ಧಿ ಕಾಮಗಾರಿಗೆ ಒತ್ತುಕೊಡಬೇಕು. ಒಬ್ಬರು ರಸ್ತೆ, ಇನ್ನೊಬ್ಬರು ಚರಂಡಿ, ಮತ್ತೊಬ್ಬರು ಸಮುದಾಯ ಭವನ ನಿರ್ಮಾಣ ಹೀಗೆ ಸಮನ್ವಯದಿಂದ ಕೆಲಸ ಮಾಡಿದರೆ ಅಭಿವೃದ್ದಿ ಬೇಗ ಸಾಧ್ಯವಾಗುತ್ತದೆ‘ ಎಂದು ತಿಳಿಸಿದರು.
‘ಪ್ರೆಸ್ ಗೀಲ್ಡ್ ಮೂಲಕ ಪತ್ರಕರ್ತರು ಜನರ ಸಮಸ್ಯೆಗಳನ್ನು ಸರ್ಕಾರದ ಗಮಬಕ್ಕೆ ತರುವ ಮಹತ್ವದ ಕೆಲಸ ಮಾಡುತ್ತಿದ್ದು, ಪ್ರೆಸ್ ಗೀಲ್ಡ್ ಕಟ್ಟಡ ಆಧುನೀಕರಣದ ಅವಶ್ಯಕತೆ ಇರುವುದನ್ನು ಮನಗಂಡು ಈ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ’ ಎಂದು ತಿಳಿಸಿದರು.
‘ಕಳೆದ ಒಂದು ವರ್ಷದಲ್ಲಿ ಹತ್ತಾರು ಯೋಜನೆಗಳ ಮೂಲಕ ಜಿಲ್ಲೆಯ ಜನರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ‘ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ರಜಾಕ್ ಉಸ್ತಾದ್, ಅಬ್ದುಲ್ ಕರೀಮ, ಡಿ.ಕೆ.ಮುರಳಿ ಯಾದವ, ಎಂ.ಕೆ.ಬಾಬರ್, ಬದಸವರಾಜ ದರೂರು, ಕೆ.ಅಸ್ಲಂ ಪಾಶಾ, ಜೆ.ಸತ್ಯನಾಥ, ಕೆ.ಇ.ಕುಮಾರ, ಮೊಹಮ್ಮದ ಉಸ್ಮಾನ, ಪ್ರೆಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ:
ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ರಾಯಚೂರು ವಿಧಾನ ಸಭಾ ಕ್ಷೇತ್ರದ ಬೀಜನಗೇರಾ ಗ್ರಾಮದಲ್ಲಿ ₹ 15ಲಕ್ಷ ವೆಚ್ಚದ ಆಂಜನೇಯ ದೇವಸ್ಥಾನದ ಆವರಣ ಗೋಡೆ ನಿರ್ಮಾಣ, ₹ 5 ಲಕ್ಷ ವೆಚ್ಚದಲ್ಲಿ ಬೀಜನಗೇರ ಆಂಜನೇಯ ದೇವಸ್ಥಾನದ ಮುಂದಿನ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಕಳೆದ ವರ್ಷದ ಅನುದಾನದಲ್ಲಿ ಮಂಜೂರಾಗಿದ್ದ ಬೋಳಮಾನದೊಡ್ಡಿ ಗ್ರಾಮದ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬಾಬುಜಗಜೀವನ ರಾಮ್ ವೃತ್ತದಲ್ಲಿ ಹೈ ಮಾಸ್ಟ್ ಉದ್ಘಾಟನೆ ಮಾಡಲಾಯಿತು ಹಾಗೂ ಬೋಳಮಾನದೊಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ನಿರ್ಮಿಸಿದ ಶೌಚಾಲಯ ಉದ್ಘಾಟನೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.