ADVERTISEMENT

’ಮಕ್ಕಳ ಬದುಕು ಅರಳಿಸುವ ಜವಾಬ್ದಾರಿ ಶಿಕ್ಷಕರದ್ದು’

ಶಿಕ್ಷಕರ ದಿನಾಚರಣೆ: ಜಿಲ್ಲಾ ಮತ್ತು ತಾಲ್ಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 14:24 IST
Last Updated 5 ಸೆಪ್ಟೆಂಬರ್ 2022, 14:24 IST
ರಾಯಚೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ. ಶರಭೇಂದ್ರಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.
ರಾಯಚೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ. ಶರಭೇಂದ್ರಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.   

ರಾಯಚೂರು: ಮಕ್ಕಳ ಬದುಕು ಅರಳಿಸುವ ಉನ್ನತ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ. ಶರಭೇಂದ್ರಸ್ವಾಮಿ ಹೇಳಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಸಾರ್ವಜನಿಕ ಶಿಕ್ಷಣಿ ಇಲಾಖೆಯಿಂದ ಭಾರತ ರತ್ನ ಡಾ.ಸರ್ವಪಲ್ಲಿ ರಾಮಕೃಷ್ಣನ್ ಅವರ 135ನೇ ಜನ್ಮ ದಿನಾಚರಣೆ ನಿಮಿತ್ತ ಜಿಲ್ಲಾ ಮತ್ತು ರಾಯಚೂರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ವೇದ, ಪುರಾಣಗಳ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಆಧುನಿಕ ಕಾಲದಲ್ಲಿ ಇದು ಔಪಚಾರಿಕತೆಗೆ ಸೀಮಿತವಾಗಿದೆ. ಹಾಗಾಗದಂತೆ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಎಚ್ಚರವಹಿಸಬೇಕು ಎಂದರು.

ADVERTISEMENT

ಶಿಕ್ಷಕರ ದಿನಾಚರಣೆ ರಾಷ್ಟ್ರೀಯ ಹಬ್ಬವಿದ್ದಂತೆ. ಅದಕ್ಕೆ ಬಹಳ ಪ್ರಾಮುಖ್ಯವಿದೆ. ಖಾಲಿ ಕಾಗದದಂತಹ ಮಕ್ಕಳ ಮನಸ್ಸಿನಲ್ಲಿ ಉತ್ತಮ ವಿಚಾರ, ಜ್ಞಾನ ಮೂಡಿಸಿ ಅವರ ಶಿಕ್ಷಕ ವೃತ್ತಿ ಕೇವಲ ವೇತನ ಪಡೆಯುವ ನೌಕರಿ ಮಾತ್ರ ಎಂದು ಭಾವಿಸದೇ, ದೇಶ ಕಟ್ಟಲು ದೊರೆತ ಮಹತ್ವದ ಅವಕಾಶ ಎಂದು ಪರಿಗಣಿಸಬೇಕು ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ಶಿಕ್ಷಕರು ಪ್ರಾಮಾಣಿಕ ಸೇವೆಯಿಂದ ಸದೃಢ ದೇಶ ಕಟ್ಟಲು ಸಾಧ್ಯ. ಶಿಕ್ಷಕರು ಎದುರಿಗೆ ಹೆಚ್ಚು ಸವಾಲುಗಳಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಿ ಶಾಲೆಗಳನ್ನು, ಮಕ್ಕಳನ್ನು ಕಟ್ಟಿ ಬೆಳೆಸಬೇಕು ಎಂದು ಹೇಳಿದರು.

ಶಾಸಕ ಡಾ.ಎಸ್.ಶಿವರಾಜ ಪಾಟೀಲ ಮಾತನಾಡಿ, ದೇಶದ ರಾಷ್ಟ್ರಪತಿಯಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಕರೆ ನೀಡಿರುವುದು. ಆ ವೃತ್ತಿಯ ಶ್ರೇಷ್ಠತೆ ಮತ್ತು ಮಹತ್ವವನ್ನು ಸಾರುತ್ತದೆ. ಆಟ ಪಾಠಗಳ ಜೊತೆಗೆ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಕೂಡ ಬೆಳೆಸುವ ಹೊಣೆ ಶಿಕ್ಷಕರ ಮೇಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಅವರನ್ನು ಸಹ ಶೈಕ್ಷಣಿಕ ರಂಗದಲ್ಲಿ ಆಸಕ್ತಿವಹಿಸುವಂತೆ ಮಾಡಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಾನಾಡಿದರು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ: ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ದೇವದುರ್ಗ ತಾಲ್ಲೂಕಿನ ಲಿಂಗನದೊಡ್ಡಿ ಶಾಲೆಯ ಗಿರಿಜಮ್ಮ, ಲಿಂಗಸುಗೂರು ತಾಲ್ಲೂಕಿನ ದೇವರಭೂಪೂರು ಶಾಲೆಯ ಕಾಳಪ್ಪ ಬಡಿಗೇರ, ಮಾನ್ವಿ ತಾಲ್ಲೂಕಿನ ಅಂಬಿಗೇರ ಗುಡಿಸಲು ಕಾತರಕಿ ಶಾಲೆಯ ಸುಜಾತ, ರಾಯಚೂರಿನ ಮೈಲಾರನಗರದ ಶಾಲೆಯ ಮಾರೆಪ್ಪ, ಸಿಂಧನೂರಿನ ಗುರು ಸಿದ್ದಪ್ಪನ ಮಠ ಶಾಲೆಯ ಕುಂಬಾರ ಸೂರ್ಯ ಅವರಿಗೆ ನೀಡಲಾಯಿತು.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದೇವದುರ್ಗ ತಾಲ್ಲೂಕಿನ ಮರಿಗೆಮ್ಮದಿಬ್ಬಿ ತಾಂಡಾದ ಶಾಲೆಯ ಮುಖ್ಯ ಗುರು ತುಳಜಾರಾಮ, ಲಿಂಗಸುಗೂರು ತಾಲ್ಲೂಕಿನ ಬಯ್ಯಾಪೂರ ಶಾಲೆಯ ಮಂಜುನಾಥ ಎನ್. ತಳಗೇರಿ, ಮಾನ್ವಿ ತಾಲ್ಲೂಕಿನ ಕುರ್ಡಿಯ ಉರ್ದು ಶಾಲೆಯ ಕುಮಾರಿ ರೇಣವ್ವ, ರಾಯಚೂರು ತಾಲ್ಲೂಕಿನ ಯರಮರಸ್ ಕ್ಯಾಂಪಿನ ಶಾಲೆಯ ಸೈಯದಾ ಸಾಜೀದಾ ಫಾತಿಮಾ, ರಾಯಚೂರಿನ ಕೆಇಬಿ ಕಾಲೋನಿ ಶಾಲೆಯ ಪ್ರೇಮಲತಾ ದೈ.ಶಿ, ಮಾನ್ವಿ ತಾಲ್ಲೂಕಿನ ಕವಿತಾಳ ಕನ್ಯಾ ಶಾಲೆಯ ಬಸವರಾಜ, ರಾಯಚೂರು ತಾಲ್ಲೂಕಿನ ಮಟಮಾರಿಯ ಕೆಪಿಎಸ್ ಶಾಲೆಯ ರಂಗನಾಥ ಅವರಿಗೆ ನೀಡಲಾಯಿತು.

ಪ್ರೌಢ ವಿಭಾಗದಲ್ಲಿ ದೇವದುರ್ಗ ತಾಲ್ಲೂಕಿನ ಗಬ್ಬೂರು ಶಾಲೆಯ ಬಿಂದು ಕುಮಾರ್, ಲಿಂಗಸುಗೂರು ತಾಲ್ಲೂಕಿನ ಮುದಗಲ್ ಬಾಲಕಿಯರ ಶಾಲೆಯ ಶಂಕರಗೌಡ, ಮಾನ್ವಿ ಸಿರವಾರ ಶಾಲೆಯ ರಾಮಣ್ಣ ಮಡಿವಾಳ ನಾಟಕ, ರಾಯಚೂರಿನ ಜಹೀರಾಬಾದ ಶಾಲೆಯ ಅನುಸೂಯಾ ಹವಾಲ್ದಾರ, ರಾಯಚೂರು ತಾಲ್ಲೂಕಿನ ದೇವಸುಗೂರು ಶಾಲೆಯ ಮಂಜುಳಾ ಅವರಿಗೆ ವಿವಿಧ ಗಣ್ಯರಿಂದ ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಲ್ಯಾಪ್‌ಟಾಪ್ ವಿತರಣೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಂ.ವೃಷಬೇಂದ್ರಯ್ಯ ಸ್ವಾಮಿ, ಡಯಟ್ ಉಪ ನಿರ್ದೇಶಕ ಎಸ್.ಎಂ.ಹತ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಈರಣ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.