ADVERTISEMENT

ಏಮ್ಸ್‌ ಮಂಜೂರು ಮಾಡಿಸಿ, ಇಲ್ಲ ರಾಜೀನಾಮೆ ಕೊಡಿ: ಹೋರಾಟ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 15:24 IST
Last Updated 1 ಫೆಬ್ರುವರಿ 2025, 15:24 IST
ರಾಯಚೂರಿನ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಮುಖಂಡರು ಧರಣಿ ಸತ್ಯಾಗ್ರಹ ನಡೆಸಿದರು
ರಾಯಚೂರಿನ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಮುಖಂಡರು ಧರಣಿ ಸತ್ಯಾಗ್ರಹ ನಡೆಸಿದರು   

ರಾಯಚೂರು: ‘ರಾಜ್ಯದ ಬಿಜೆಪಿ ಸಂಸದರು, ಶಾಸಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಿಸಬೇಕು, ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು‘ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 996 ನೇ ದಿನಕ್ಕೆ ಪದಾರ್ಪಣೆ ಮಾಡಿದೆ. ಕೇಂದ್ರ ಸರ್ಕಾರ ಜಿಲ್ಲೆಯ ಜನರ ಹೋರಾಟಕ್ಕೂ ಬೆಲೆ ಕೊಡುತ್ತಿಲ್ಲ. ಜಿಲ್ಲೆಯ ಜನರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟದಲ್ಲಿ ಪಾಲ್ಗೊಳ್ಳಬೇಕು‘ ಎಂದು ಹೋರಾಟಗಾರ ಚಂದ್ರಶೇಖರ ಬಾಳೆ ಹೇಳಿದರು.

ಹಿಂದುಳಿದ ರೋಗಗ್ರಸ್ತ ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿ ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಇಲ್ಲಿಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ADVERTISEMENT

‘ರಾಜ್ಯ ಸರ್ಕಾರ ಈಗಾಗಲೇ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಏಮ್ಸ್‌ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು.ಆದರೆ, ಕಲ್ಯಾಣ ಕರ್ನಾಟಕದ ಜನತೆಯ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಡಾ. ಬಸವರಾಜ ಕಳಸ, ಜಾನ್ ವೆಸ್ಲಿ, ಎಸ್. ತಿಮ್ಮಾರೆಡ್ಡಿ, ನರಸಪ್ಪ ಬಾಡಿಯಲ್, ಡಾ. ಜಗದೀಶ ಪೂರತಿಪ್ಲಿ, ಶ್ರೀನಿವಾಸ ನಾಗಲದಿನ್ನಿ, ಶಾಂತಗೌಡ ಸುಬೇದಾರ್, ಎಂ.ಆರ್. ಬೇರಿ, ರಾಘವೇಂದ್ರ ಗೌಡ , ಸಾಧಿಕಖಾನ್ ಯರಗೇರಾ, ಮಹಮ್ಮದ್ ಇಸಾಕ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಮಲ್ಲನಗೌಡ ಹದಿನಾಳ, ವಿನಯಕುಮಾರ ಚಿತ್ರಗಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.