ADVERTISEMENT

ಜಿಲ್ಲೆಯ ಗ್ರಾಪಂ ಕಣದಲ್ಲಿ 7,598 ಅಭ್ಯರ್ಥಿಗಳು

ಗ್ರಾಮ ಪಂಚಾಯಿತಿ ಕಣದಲ್ಲಿ ರಂಗೇರಿದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 13:52 IST
Last Updated 20 ಡಿಸೆಂಬರ್ 2020, 13:52 IST

ರಾಯಚೂರು: ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳ 172 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚುನಾವಣೆ ರಂಗೇರಿದ್ದು, ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ.

ರಾಯಚೂರು, ಮಾನ್ವಿ, ಸಿರವಾರ ಹಾಗೂ ದೇವದುರ್ಗ ತಾಲ್ಲೂಕುಗಳಲ್ಲಿ ಮೊದಲ ಹಂತದ ಚುನಾವಣೆಗಾಗಿ ಡಿಸೆಂಬರ್‌ 22 ರಂದು ಮತದಾನ ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಮಾಡುವುದು ಮುಕ್ತಾಯವಾಗಿದ್ದು, ಮನೆಮನೆಗೆ ತೆರಳಿ ಅಂತಿಮವಾಗಿ ಮತಯಾಚನೆ ಮಾಡುವುದು ಭರದಿಂದ ಸಾಗಿದೆ. ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 4,438 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. 203 ಅಭ್ಯರ್ಥಿಗಳು ಅವಿರೋಧವಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ನಾಲ್ಕು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ಒಂದು ಸ್ಥಾನಕ್ಕೆ ಸರಾಸರಿ 2.75 ರಷ್ಟು ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸಿಂಧನೂರು, ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕುಗಳಲ್ಲಿ ಚುನಾವಣೆ ಪ್ರಚಾರ ಭರಾಟೆ ಶುರುವಾಗಿದೆ. ಪ್ರತಿ ಗ್ರಾಮದಲ್ಲಿ ಬೆಳಗಾಗುವಂತೆ ಹಾಗೂ ಕತ್ತಲು ಆವರಿಸುತ್ತಿದ್ದಂತೆ ಸೋಲು, ಗೆಲುವಿನ ಚರ್ಚೆ ಆರಂಭವಾಗಿದೆ. ಮತದಾರರ ಮನವೊಲಿಸುವುದಕ್ಕಾಗಿ ಅಭ್ಯರ್ಥಿಗಳು ವಿವಿಧ ಆಯಾಮಗಳ ಲೆಕ್ಕಾಚಾರ ಮಾಡುತ್ತಿದ್ದಾರೆ. ಜಾತಿವಾರು ಪ್ರಭಾವಿಗಳನ್ನು ಒಲಿಸಿಕೊಳ್ಳಲು ಮದ್ಯದ ಕೂಟಗಳನ್ನು ಆಯೋಜಿಸುವುದು, ಭೋಜನಕೂಟ ಮಾಡುವುದು ಸಾಮಾನ್ಯವಾಗಿದೆ.

ADVERTISEMENT

ಹೋಬಳಿಗಳು, ತಾಲ್ಲೂಕು ಕೇಂದ್ರಗಳ ಹೊರಭಾಗದಲ್ಲಿ ಬಾರ್‌, ದಾಬಾ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಭಾರಿ ವಹಿವಾಟು ನಡೆಯುತ್ತಿದೆ. ಸಾಮಾನ್ಯವಾಗಿ ದಿನಗಳಲ್ಲಿ ದಿನಕ್ಕೆ ₹10 ಸಾವಿರ ವಹಿವಾಟು ಕಷ್ಟಸಾಧ್ಯವಾಗಿತ್ತು. ಇದೀಗ ಎರಡು ಲಕ್ಷಕ್ಕೂ ಮೀರಿ ವಹಿವಾಟು ಮಾಡುತ್ತಿವೆ. ಅಧಿಕೃತವಾಗಿ ಅಭ್ಯರ್ಥಿಗಳು ಪಾರ್ಟಿ ಆಯೋಜಿಸುತ್ತಿರುವುದನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ, ವಾಸ್ತವದಲ್ಲಿ ಮದ್ಯ ಮಾರಾಟ, ಮಾಂಸಾಹಾರದ ವಹಿವಾಟು ಎಂದಿಗಿಂತಲೂ ದುಪ್ಪಟ್ಟಾಗಿದೆ.

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಡಿಸೆಂಬರ್‌ 27 ರಂದು ಮತದಾನ ನಡೆಯಲಿದೆ. ಒಟ್ಟು 1,561 ಸ್ಥಾನಗಳ ಪೈಕಿ 77 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 215 ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ ಅಂತಿಮವಾಗಿ ಚುನಾವಣೆ ಕಣದಲ್ಲಿ 3160 ಅಭ್ಯರ್ಥಿಗಳಿದ್ದಾರೆ. ಒಂದು ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಸರಾಸರಿ 2.08 ರಷ್ಟು ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.