ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸಮೀಪದ ರೋಡಲಬಂಡ (ತವಗ) ಗ್ರಾ.ಪಂ ಕಚೇರಿ ಮುಂಭಾಗದಲ್ಲಿ ನಿರ್ಮಿಸುತ್ತಿರುವ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡದ ಕಾಮಗಾರಿ ದಶಕ ಕಳೆದರೂ ಪೂರ್ಣಗೊಂಡಿಲ್ಲ. ಅಪೂರ್ಣ ಕಟ್ಟಡ ಪಾಳು ಬಿದ್ದಿದೆ.
2015-16ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹9.50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಕಟ್ಟಡ ನಿರ್ಮಾಣಕ್ಕೆ ₹9 ಲಕ್ಷ ಬಿಡುಗಡೆಯಾದರೂ ₹4 ಲಕ್ಷ ಖರ್ಚು ಮಾಡಲಾಗಿದೆ. ಸೇವಾ ಕೇಂದ್ರ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ತಯಾರಿಸುವಾಗ ಆಫ್ ಲೈನ್ ಪದ್ಧತಿ ಜಾರಿಯಲ್ಲಿತ್ತು. ಬಳಿಕ ಆನ್ ಲೈನ್ ವ್ಯವಸ್ಧೆ ಜಾರಿಯಾದಾಗ ಕಾಮಗಾರಿ ವಿವರ ನಮೂದಿಸಿದೆ, ಕಾಮಗಾರಿ ಪೂರ್ಣಗೊಳಿಸದೆ ಕೆಲಸಕ್ಕಿಂತ ಅಧಿಕ ಬಿಲ್ ಮಾಡಿಕೊಂಡು ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ ಎನ್ನುವುದು ಇಲ್ಲಿನ ಜನರ ದೂರು.
ಜನರಿಗೆ ಉಪಯೋಗವಾಬೇಕಿದ್ದ ಸೇವಾ ಕೇಂದ್ರ ಕುಡುಕರ ಅಡ್ಡೆಯಾಗಿದೆ, ಸಂಜೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
ತಾಲ್ಲೂಕು ಪಂಚಾಯಿತಿ ಇಒ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿದೆ ಎನ್ನುತ್ತಾರೆ ಗ್ರಾಮಸ್ಥರು.
ತನಿಖೆಗೆ ಒತ್ತಾಯ: ಸಂಬಂದಪಟ್ಟ ಅಧಿಕಾರಿಗಳ ಇತ್ತ ಗಮನಹರಿಸಿ ಸ್ಧಗಿತವಾಗಿರುವ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ ಅಧಿಕ ಬಿಲ್ ಪಾವತಿ ಮಾಡಿದ ಪಿಡಿಒ, ತಾಲ್ಲೂಕು ಪಂಚಾಯಿತಿ ತಾಂತ್ರಿಕ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನ, ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಹತ್ತು ವರ್ಷದಿಂದ ನನೆಗುದಿಗೆ ಬಿದ್ದಿರುವ ಸೇವಾ ಕೇಂದ್ರ ಕಟ್ಟಡ ಕಾಮಗಾರಿ ಕುರಿತು ತನಿಖೆ ನಡೆಸಿ ತಪ್ಪಿತಸ್ಧತರ ವಿರುದ್ಧ ಕ್ರಮ ಕೈಗೊಳ್ಳಬೇಕು.– ರಂಗಪ್ಪ ವಡ್ಡರ, ಕರುನಾಡ ವಿಜಯ ಸೇನೆ ಗ್ರಾಮ ಘಟಕದ ಅಧ್ಯಕ್ಷ ರೋಡಲಬಂಡ
ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣದ ಬಗ್ಗೆ ದೂರುಗಳು ಬಂದಿವೆ. ಅಲ್ಲಿನ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದು.– ವೆಂಕಟೇಶ ದೇಸಾಯಿ, ಸಹಾಯಕ ನಿರ್ದೇಶಕ ನರೇಗಾ ಲಿಂಗಸುಗೂರು
ರೋಡಲಬಂಡ ಗ್ರಾಮದಲ್ಲಿ ಪಾಳು ಬಿದ್ದ ಸೇವಾ ಕೇಂದ್ರ ಜನರ ಉಪಯೋಗಕ್ಕೆ ಬರುವಂತೆ ಅಧಿಕಾರಿಗಳು ಕ್ರಮ ಕೈಗಳ್ಳದಿರುವುದು ವಿಪರ್ಯಾಸ.– ಶಿವು, ಗ್ರಾಮಸ್ಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.