
ರಾಯಚೂರು: ‘ಪ್ರಗತಿಪರ ವಿಚಾರಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಅಖಂಡತೆಗೆ ಇರುವ ಬೆಲೆ ಒಡಕಿಗೆ ಸಿಗಲಾರದೆಂಬ ಸತ್ಯವನ್ನರಿತು ಮನುಷ್ಯ ಬಾಳಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳ ಲಿಂಗಾಂಗ ಸಾಮರಸ್ಯದ 25ನೇ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಕಾಯಕ ಮತ್ತು ದಾಸೋಹದ ಮೂಲಕ ಸಕಲರ ಹಿತ ಕಾಪಾಡಿದ ಧರ್ಮ ವೀರಶೈವ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವಿಶ್ವ ಬಂಧುತ್ವದ ಶಾಂತಿ–ಸಾಮರಸ್ಯದ ಸಂದೇಶ ಸಕಲರಿಗೂ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.
‘ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸಮರ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ಕಾಲ ಕಾಲಕ್ಕೆ ಭಾವೈಕ್ಯದ ಬೆಸುಗೆಯನ್ನುಂಟು ಮಾಡಿವೆ’ ಎಂದರು.
‘ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿ ತಲುಪಿಸಲು ಗುರು ಬೇಕು. ಜನರ ಮನೆ ಮನಗಳಲ್ಲಿ ಅಡಗಿರುವ ದುರ್ಗುಣಗಳನ್ನು ನಾಶ ಮಾಡಿ ಸಭ್ಯತೆ, ಸಂಸ್ಕೃತಿ ಬೆಳೆಸುವುದೇ ಗುರು ಪೀಠಗಳ ಪರಮ ಗುರಿಯಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ‘ಧರ್ಮ ಗಂಗೋತ್ರಿ’ ಮತ್ತು ‘ಶ್ರೀಶಿವ ರಂಭಾಪುರೀಶ ಸಭಾಂಗಣ’ವನ್ನು ಉದ್ಘಾಟಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಭೂಪಾಲ ನಾಡಗೌಡ ಹಾಗೂ ಶಾಸಕ ಡಾ.ಎಸ್.ಶಿವರಾಜ ಪಾಟೀಲ ಮಾತನಾಡಿದರು
ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಗಬ್ಬೂರಿನ ಬೂದಿಬಸವ ಶಿವಾಚಾರ್ಯರು, ನೀಲಗಲ್‌ನ ಪಂಚಾಕ್ಷರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಗುರುಮೂರ್ತಿ ಶಿವಾಚಾರ್ಯರು, ವೀರಸಂಗಮೇಶ್ವರ ಶಿವಾಚಾರ್ಯರು, ಕ್ಷೀರಲಿಂಗ ಶರಣರು, ಬಿಚ್ಚಾಲಿಯ ವೀರಭದ್ರ ಶಿವಾಚಾರ್ಯರು, ಜಯಶಾಂತಲಿಂಗ ಶಿವಾಚಾರ್ಯರು, ಕಪಿಲಸಿದ್ಧ ಶಿವಾಚಾರ್ಯರು, ಸುಲ್ತಾನಪುರದ ವಿರೂಪಾಕ್ಷ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಶಾಸಕ ದದ್ದಲ್ ಬಸನಗೌಡ, ದರೂರ ಬಸವನಗೌಡ, ರಾಮಣ್ಣ ಇರಬಗೇರಾ, ಡಾ.ನಿಜಗುಣ ಶಿವಯೋಗಪ್ಪ ಜವಳಿ, ಅಂತರಗಂಗಿ ವೀರಭದ್ರಪ್ಪ, ಎ.ಎಸ್.ಪಾಟೀಲ, ರಮೇಶ ಅಜಗರಣಿ, ಎಸ್.ಎಲ್.ಕೇಶವರೆಡ್ಡಿ ಉಪಸ್ಥಿತರಿದ್ದರು.
ಚನ್ನಬಸವಸ್ವಾಮಿ ಸ್ವಾಗಸಿದರು. ವಿಜಯ ರಾಜೇಂದ್ರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.