ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಮುಂಗಾರು ಬೆಳೆಗಳಲ್ಲಿ ಸಾವಯವ ಮತ್ತು ನವೀನ ತಂತ್ರಜ್ಞಾನಗಳು’ ಕುರಿತ ವಿಚಾರ ಸಂಕಿರಣ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಕುಲಪತಿ ಎಂ.ಹನುಮಂತಪ್ಪ ಉದ್ಘಾಟಿಸಿದರು.
ರಾಯಚೂರು: ‘ಮಣ್ಣಿ ಫಲವತ್ತತೆಗೆ ಜೈವಿಕ ಗುಣಧರ್ಮಗಳು ಅಗತ್ಯ. ಸುಸ್ಥಿರ ಕೃಷಿಗೆ ಮಣ್ಣಿನ ಫಲವತ್ತತೆ ಕಾಪಾಡುವುದು ರೈತನ ಕರ್ತವ್ಯ. ಕೃಷಿಕರು ಸಾವಯವ ಪರ್ದಾಥಗಳು ಮಣ್ಣಿನಲ್ಲಿ ಸಹಜವಾಗಿಯೇ ಬೆರೆಯುವಂತೆ ಮಾಡುವ ಕೃಷಿ ಪದ್ಧತಿಯನ್ನು ರೈತರು ಅನುಸರಿಸಬೇಕು‘ ಎಂದು ಕುಲಪತಿ ಎಂ. ಹನುಮಂತಪ್ಪ ಸಲಹೆ ನೀಡಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ‘ಕಿಸಾನ್ ಗೋಷ್ಠಿ ಪಿಎಂ ಪ್ರಣಾಮ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ‘ಮುಂಗಾರು ಬೆಳೆಗಳಲ್ಲಿ ಸಾವಯವ ಮತ್ತು ನವೀನ ತಂತ್ರಜ್ಞಾನಗಳು‘ ಕುರಿತ ವಿಚಾರ ಸಂಕಿರಣ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಣ್ಣಿನ ಆರೋಗ್ಯ ಉತ್ತಮವಾಗಿದಲ್ಲಿ ಬೆಳೆಯೂ ಚೆನ್ನಾಗಿರುತ್ತದೆ. ಮನುಷ್ಯನ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತರು ಮಣ್ಣು ಪರೀಕ್ಷೆಯ ಆಧಾರದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು. ಕೊಟ್ಟಿಗೆ ಗೊಬ್ಬರ, ಹಸಿರಲೆ ಗೊಬ್ಬರ ಕಾಂಪೋಸ್ಟ್ ಗೊಬ್ಬರಗಳನ್ನು ಬಳಸಿದಾಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ನಿರ್ದೇಶಕ ಎನ್. ಶಿವಶಂಕರ ಮಾತನಾಡಿ, ‘ವಿಶ್ವವಿದ್ಯಾಲಯದ ಎಲ್ಲ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ, ಕೃಷಿ ವಿಸ್ತರಣಾ ಶಿಕ್ಷಣ ಮತ್ತು ಕೃಷಿ ಮಹಾವಿದ್ಯಾಲಯಗಳಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯವಿದೆ. ಮಣ್ಣು ಪರೀಕ್ಷಾ ವರದಿ ಆಧಾರದ ಮೇಲೆ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹ ವಿಸ್ತರಣಾ ನಿರ್ದೇಶಕರು ರೈತರೊಂದಿಗೆ ವೈಜ್ಞಾನಿಕ ತೋಟಗಾರಿಕೆ ಕುರಿತು ರೈತರೊಂದಿ ಸಂವಾದ ನಡೆಸಿದರು. ಮುಂಗಾರು ಬೆಳೆಗಳಲ್ಲಿ ಸಾವಯವ ಮತ್ತು ನವೀನ ತಂತ್ರಜ್ಞಾನಗಳ ಕುರಿತು ಬಸವಣ್ಣೆಪ್ಪ ಎಂ. ಎ. ರೈತರಿಗೆ ಮಾಹಿತಿ ನೀಡಿದರು.
ಮದ್ರಾಸ್ ಫರ್ಟಿಲೈಜರ್ಸ್ ಲಿಮಿಟೆಡ್‌ನ ಬಳ್ಳಾರಿಯ ಹೆಚ್ಚುವರಿ ವ್ಯವಸ್ಥಾಪಕ ಬಿ. ಬಿ. ಪಾಟೀಲ ಹಾಗೂ ರವೀಂದ್ರ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ತಿಮ್ಮಣ್ಣ ನಾಯಕ,ಸಹ ಪ್ರಾಧ್ಯಾಪಕ ಆನಂದ ಕಾಂಬಳೆ ಉಪಸ್ಥಿತರಿದ್ದರು
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮದ್ರಾಸ್ ಫರ್ಟಿಲೈಜರ್ಸ್ ಲಿಮಿಟೆಡ್, ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
Highlights - ಆರೋಗ್ಯಕರ ಮಣ್ಣಲ್ಲಿ ಉತ್ತಮ ಬೆಳೆ ಜೀವಿಗಳನ್ನು ಪೋಷಿಸುವ ಸಾಮರ್ಥ್ಯ ಮಣ್ಣಿಗಿದೆ ಸಾವಯವ ಗೊಬ್ಬರದಿಂದ ಮಣ್ಣಿನ ಸುಧಾರಣೆ
Quote -
Cut-off box - ‘40 ಸಾವಿರ ಮಣ್ಣು ಪರೀಕ್ಷೆ’ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಜಯಪ್ರಕಾಶ ಟಿ.ಸಿ. ಮಾತನಾಡಿ ‘ಇಂದು ಕೃಷಿಕರು ಹೆಚ್ಚು ಇಳುವರಿ ಪಡೆಯುವುದೊಂದೇ ಮುಖ್ಯವಲ್ಲ; ಗುಣಮಟ್ಟದ ಆಹಾರವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಅರಿವು ಎಲ್ಲರಿಗೂ ಇದೆ. ಹೀಗಾಗಿ ಸಾವಯವ ಕೃಷಿಗೆ ಹೆಚ್ಚಿನ ಬೇಡಿಕೆ ಇದೆ. ಮಣ್ಣಿನಲ್ಲಿರುವ ಪೋಷಕಾಂಶಗಳು ಹಾಗೂ ಸಾವಯವ ಪದಾರ್ಥಗಳ ಪ್ರಮಾಣವು ಮಣ್ಣಿನ ಆರೋಗ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು‘ ಎಂದು ತಿಳಿಸಿದರು. ‘ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಕೃಷಿ ಇಲಾಖೆಯ ಮೂಲಕ ಕಳೆದ ವರ್ಷ 40 ಸಾವಿರ ಮಣ್ಣು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಲಘ ಪೋಷಕಾಂಶಗಳ ಕೊರತೆ ಕಂಡು ಬಂದಿದೆ. ಹೀಗಾಗಿ ರೈತರು ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.