
ರಾಯಚೂರು: ‘ಇಂದಿನ ಯುವ ಪೀಳಿಗೆಗೆ ಸಾಮಾಜಿಕ ಮೌಲ್ಯ, ನೀತಿ, ಉತ್ತಮ ಸಂಸ್ಕಾರ ನೀಡಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸಬೇಕಿದೆ. ಮಹನೀಯರ ಜಯಂತಿಗಳ ಆಚರಣೆಯ ಉದ್ದೇಶವೂ ಇದೇ ಆಗಿದೆ’ ಎಂದು ರಾಯಚೂರು ಉಪವಿಭಾಗಾಧಿಕಾರಿ ಡಾ.ಹಂಪಣ್ಣ ಸಜ್ಜನ್ ಅಭಿಪ್ರಾಯಪಟ್ಟರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಆಯೋಜಿಸಲಾಗಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶರಣರು, ದಾರ್ಶನಿಕರು, ಸೂಫಿ–ಸಂತರು ಸಮಾಜದಲ್ಲಿರುವ ಅಂಕು–ಡೊಂಕು ತಿದ್ದಲು ನೀಡಿದ ಸಂದೇಶಗಳು, ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಈ ದಿಸೆಯಲ್ಲಿ ರೇಣುಕಾಚಾರ್ಯರೂ ಪ್ರಮುಖರಾಗಿದ್ದು, ಅವರ ಆದರ್ಶಗಳನ್ನು ನಾವು ಅರ್ಥೈಸಿಕೊಂಡು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಬಣಮಗಿಯ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ,‘ ಎಲ್ಲ ಧರ್ಮಗಳಿಗೆ ಆಶ್ರಯ ನೀಡಿದ ಧರ್ಮ ವೀರಶೈವ ಧರ್ಮವಾಗಿದೆ. ಮಕ್ಕಳಿಗೆ ಸಂಸ್ಕಾರ, ಲಿಂಗ ಪೂಜೆ ಕಲಿಸಬೇಕು. ಎಲ್ಲ ಧರ್ಮಗಳಿಂತ ವೀರಶೈವ ಧರ್ಮ ದೊಡ್ಡದಾಗಿದೆ. ಪಂಚ ಪೀಠಗಳನ್ನು ಸ್ಥಾಪಿಸಿ ಪಂಚ ಪೀಠಾಧಿಕಾರಿಗಳನ್ನು ನೇಮಿಸಿದರು. ರೇಣುಕಾಚಾರ್ಯರು ಕೇವಲ ಒಂದು ಸಮಾಜದವರನ್ನು ಪ್ರೀತಿಯಿಂದ ಕಾಣದೆ ಎಲ್ಲ ಸಮಾಜದವರನ್ನು ಪ್ರೀತಿ ವಿಶ್ವಾಸದಿಂದ ನೋಡಿದ್ದಾರೆ’ ಎಂದರು.
ಮೆರವಣಿಗೆಗೆ ಚಾಲನೆ: ಇದಕ್ಕೂ ಮುಂಚೆ, ನಗರದ ಹೈದರಾಬಾದ್ ಬೈಪಾಸ್ ರಸ್ತೆ ಬಳಿರುವ ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಗೆ ಶಾಸಕ ಡಾ.ಶಿವರಾಜ ಎಸ್.ಪಾಟೀಲ ಅವರು ಚಾಲನೆ ನೀಡಿದರು.
ಶಾಂತಮಲ್ಲ ಶಿವಾಚಾರ್ಯರು, ಅಭಿನವ ರಾಚೋಟಿವೀರ ಶಿವಾಚಾರ್ಯರು, ವೀರ ಸಂಗಮೇಶ್ವರ ಶಿವಾಚಾರ್ಯರು ಮಾತನಾಡಿದರು.
ಪಾಲಿಕೆಯ ಉಪ ಆಯುಕ್ತೆ ಸಂತೋಷ ರಾಣಿ, ವಲಯ ಆಯುಕ್ತ ಮಲ್ಲಿಕಾರ್ಜುನ, ಸಮಾಜದ ಜಿಲ್ಲಾಧ್ಯಕ್ಷ ಶರಣು ಭೂಪಾಲ್ ನಾಡಗೌಡ, ಸಮಾಜದ ಮುಖಂಡರಾದ ವೀರಯ್ಯ ಸ್ವಾಮಿ, ಮಂಜುನಾಥ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.