
ರಾಯಚೂರು: ತೆಲಂಗಾಣ ಹಾಗೂ ಆಂಧ್ರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ರಾಯಚೂರು ಗ್ರಾಮೀಣ ವಿಧಾನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾರ್ವಜನಿಕರಿಂದ ಹೆಚ್ಚಿನ ಒತ್ತಡ ಬಂದಿದೆ. ಈ ಬಾರಿ ಈ ಕ್ಷೇತ್ರದಿಂದಲೇ ಹೆಚ್ಚಿನ ಪ್ರಸ್ತಾವಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿವೆ.
ವಿಮಾನ ನಿಲ್ಧಾಣವು ರಾಯಚೂರು ಹೊರವಲಯದಲ್ಲಿದ್ದರೂ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ರಾಯಚೂರು ಅತ್ಯಂತ ಹಳೆಯ ಜಿಲ್ಲೆಯಾದರೂ ಇಲ್ಲಿ ವಿಮಾನ ನಿಲ್ದಾಣವೇ ಇರಲಿಲ್ಲ. ಇಲ್ಲಿಂದ ವಿಮಾನ ಹಾರಾಟ ಶುರುವಾಗಲು ಕನಿಷ್ಠ ಮೂರು ವರ್ಷಗಳಾದರೂ ಬೇಕಾಗಲಿದೆ ಎನ್ನುವುದು ಜಿಲ್ಲೆಯ ಜನರ ಅನಿಸಿಕೆಯಾಗಿದೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವೂ ಇದೇ ಕ್ಷೇತ್ರದಲ್ಲಿದೆ. ಮೂಲಸೌಕರ್ಯ ಹಾಗೂ ಅನುದಾನ ಕೊರತೆಯಿಂದ ಸೊರಗ ತೊಡಗಿದೆ. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ.
ರಾಯಚೂರು ತಾಲ್ಲೂಕನ್ನು ವಿಭಜನೆ ಮಾಡಿ, ರಾಯಚೂರು ಗ್ರಾಮೀಣ ಅಥವಾ ಯರಗೇರಾ ತಾಲ್ಲೂಕು ಘೋಷಣೆ ಮಾಡಬೇಕು ಎನ್ನುವ ಬೇಡಿಕೆ ಮುನ್ನಲೆಗೆ ಬಂದಿದೆ. ಇದು ಅಗತ್ಯವೂ ಇದೆ. ಸರ್ಕಾರದ ಮಟ್ಟದಲ್ಲಿ ತಾಲ್ಲೂಕು ಪುನರ್ ಪರಿಶೀಲನೆ ಕಾರ್ಯವೂ ನಡೆದಿದೆ ಎನ್ನಲಾಗಿದೆ. ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆಯಾದರೆ ಕ್ಷೇ್ತ್ರದ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಧಾರ್ಮಿಕ ಹಾಗೂ ಐತಿಹಾಸಿಕ ತಾಣಗಳು ಇದ್ದರೂ ಹಲವು ಕಾರಣಗಳಿಂದ ಅಭಿವೃದ್ಧಿ ಕಂಡಿಲ್ಲ.ಇವುಗಳ ಅಭಿವೃದ್ದಿಗೂ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದಲೂ ಅಭಿವೃದ್ಧಿಗೆ ನೆರವು ದೊರಕಿಲ್ಲ. ಹೀಗಾಗಿ ಈ ಕ್ಷೇ್ತ್ರದ ಜನ ರಾಜ್ಯದ ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿರುವ ಯಾರಗೇರಾ ಹೋಬಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುಮೋದನೆ ಕೊಡಬೇಕು. ಬಸ್ ನಿಲ್ದಾಣ ಮಂಜೂರು ಮಾಡಬೇಕು , ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ಕೊಡಬೇಕು. ಕೃಷ್ಣ ನದಿಯಿಂದ ಗ್ರಾಮಾಂತರ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಗೆ ಅನುಮದನೆ ನೀಡಬೇಕು. ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಅನುಮೋದನೆ ನೀಡಬೇಕು‘ ಎಂದು ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಮುಖಂಡ ಅಜೀಜ್ ಜಾಗೀರದಾರ್ ಒತ್ತಾಯಿಸುತ್ತಾರೆ.
ಅತಿ ಹಿಂದುಳಿದಿರುವ ರಾಯಚೂರು ತಾಲ್ಲೂಕಿನ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಕೊಡಬೇಕು. ಇದು ಗ್ರಾಮೀಣ ಕ್ರೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ.ರಂಗನಾಥ ಪೊಲೀಸ್ ಪಾಟೀಲ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ರಾಯಚೂರು ಬಹುಭಾಷಿಕ ಹಾಗೂ ಬಹು ಸಂಸ್ಕೃತಿಯ ಜಿಲ್ಲೆಯಾಗಿದೆ. ಐದು ವರ್ಷದ ಅವಧಿಯಲ್ಲಿ ಒಂದು ಬಾರಿಯಾದರೂ ರಾಯಚೂರು ಗಡಿಯಲ್ಲಿ ಗಡಿನಾಡು ಉತ್ಸವ ನಡೆಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು.ಭಗತರಾಜ ನಿಜಾಮಕಾರಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ
₹500 ಕೋಟಿ ಅಂದಾಜು
ವೆಚ್ಚದ ಯೋಜನೆಗಳ ಪ್ರಸ್ತಾವ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವು ಹಿಂದುಳಿದಿರುವ ಕಾರಣ ವಿವಿಧ ಯೋಜನೆಗಳ ಅಡಿ ಅನುದಾನ ಕೋರಿ ಸುಮಾರು ₹ 500 ಕೋಟಿ ಮೊತ್ತದ ಯೋಜನೆಗಳ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕರೂ ಆದ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳುತ್ತಾರೆ. ರಾಯಚೂರು ತಾಲ್ಲೂಕಿನ ವ್ಯಾಪ್ತಿ ದೊಡ್ಡದಾಗಿದೆ. ಹೀಗಾಗಿ ಯರಗೇರಾ ತಾಲ್ಲೂಕು ಘೋಷಣೆ ಮಾಡಬೇಕು. ಪ್ರೆಸ್ಸಿಂಗ್‌ನಲ್ಲಿ ಗುಜರಾತದ ಅಹಮದಾಬಾದ್ ಮೊದಲ ಸ್ಥಾನದಲ್ಲಿದ್ದರೆ ರಾಯಚೂರು ನಂತರದ ಸ್ಥಾನದಲ್ಲಿದೆ. ಇದಕ್ಕಾಗಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮಂಜೂರು ಮಾಡಬೇಕು. ರಾಯಚೂರು ಚಂದ್ರಬಂಡಾ ಸಮೀಪದ 400 ಎಕರೆ ಪ್ರದೇಶ ಗುರುತಿಸಲಾಗಿದೆ. ಸರ್ಕಾರ ಟೆಕ್ಸ್‌ಟೈಲ್ ಪಾರ್ಕ್ ಮಂಜೂರು ಮಾಡಿದರೆ ಜಿಲ್ಲೆಯ 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎನ್ನುತ್ತಾರೆ. ತುಂಗಭದ್ರಾ ನದಿ ನೀರು ಬಳಸಿಕೊಳ್ಳಲು ₹200 ಕೋಟಿ ಅಂದಾಜು ವೆಚ್ಚದ ಮಟಮಾರಿ ಸಮೀಪ ವೀರಭಧ್ರದೇಶ್ವರ ಏತ ನೀರಾವರಿ ಯೋಜನೆ ಕೃಷ್ಣಾ ನದಿಯಿಂದ 15 ಕೆರೆ ತುಂಬಿಸುವ ಯೋಜನೆ ಪ್ರಸ್ತಾವ ಕೊಡಲಾಗಿದೆ. ಜಾಗೀರ್ ವೆಂಕಟಾಪುರ ಯರಗೇರಾ ಈರಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು. ರಾಯಚೂರು ತಾಲ್ಲೂಕಿನ ಕುರಡಿ ಕಲ್ಮಲಾದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಗಿಲ್ಲೇಸೂರು ಹಾಗೂ ದೇವಸುಗೂರಿಗೆ ಪ್ರತ್ಯೇಕ ಎರಡು ಪದವಿ ಕಾಲೇಜುಗಳನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಗಿದೆ. ಕ್ಷೇತ್ರದ ವಿದ್ಯಾರ್ಥಿ ಸಮುದಾಯವನ್ನು ಗಮನದಲ್ಲಿ ಇರಿಸಿಕೊಂಡು ಒಟ್ಟು ಆರು ಹಾಸ್ಟೆಲ್‌ಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದು ತಿಳಿಸುತ್ತಾರೆ. ರಾಯಚೂರು ತಾಲ್ಲೂಕಿನ ನಾರದಗಡ್ಡೆ ಕುರುವಾಪುರ ದತ್ತಾತ್ತೇಯ ನಡುಗಡ್ಡೆ ಪಂಚಮುಖಿ ಕ್ಷೇತ್ರದ ಅಭಿವೃದ್ಧಿಗಾಗಿ ಡಿಪಿಆರ್ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮೂಲಕ ಪ್ರಸಾದ ಯೋಜನೆಯಡಿ ಕೇಂದ್ರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.