ರಾಯಚೂರು: ತಾಲ್ಲೂಕಿನ ಶಕ್ತಿನಗರದ ಆರ್‌ಟಿಪಿಎಸ್ ಮುಖ್ಯದ್ವಾರದ ಬಳಿ ಸೋಮವಾರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಟೊ ಚಾಲಕ, ಶಕ್ತಿನಗರದ ಲೇಬರ್ ಕಾಲೊನಿಯ ನಿವಾಸಿ ಸುರೇಶ ಅಲಿಯಾಸ್ ಸಿಂಹಾದ್ರಿ (35) ಮೃತಪಟ್ಟವರು. ಸುರೇಶ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಪ್ರತಿಭಟನೆ: ಆಟೊ ಚಾಲಕ ಸುರೇಶ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬದ ಸದಸ್ಯರು ಹಾಗೂ ಕಾರ್ಮಿಕರು ಆರ್‌ಟಿಪಿಎಸ್ ಮುಖ್ಯದ್ವಾರದ ರಸ್ತೆ ಬಂದ್ ಮಾಡಿ ರಸ್ತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೊ ಇಟ್ಟು ಪ್ರತಿಭಟನೆ ನಡೆಸಿದರು.
ಆರ್‌ಟಿಪಿಎಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿನಿರತ ಪ್ರತಿಭಟನಕಾರರು ಕೆಪಿಸಿಎಲ್‌ನಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಿಂದಾಗಿ ಸಂಚಾರ ಸ್ಥಗಿತಗೊಂಡು ಅನೇಕ ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಕಾರರ ಮನವೊಲಿಸಿ ತೆರವುಗೊಳಿಸಿದರು. ಶಕ್ತಿನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.