ADVERTISEMENT

ರಾಯಚೂರು: ಶಾಲೆಯಲ್ಲಿ ವಿದ್ಯುತ್ ಸ್ಪರ್ಶ; ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:26 IST
Last Updated 31 ಜನವರಿ 2026, 6:26 IST
ತನುಶ್ರೀ
ತನುಶ್ರೀ   

ಸಿಂಧನೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕುರುಕುಂದಾ ಗ್ರಾಮದ ಹರಿಜನವಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗಾಗಿ ಆರ್‌ಒ ವಾಟರ್‌ ಪ್ಯೂರಿಫೈರ್‌ನಿಂದ ನೀರು ತುಂಬಿ ಕೊಳ್ಳಲು ತೆರಳಿದ್ದ 5ನೇ ತರಗತಿ ವಿದ್ಯಾರ್ಥಿನಿ ವಿದ್ಯುತ್ ಸ್ಪರ್ಶಿಸಿ ಶುಕ್ರವಾರ ಮೃತಪಟ್ಟಿದ್ದಾಳೆ.

ತನುಶ್ರೀ ಭಜಂತ್ರಿ (10) ಮೃತಪಟ್ಟ ವಿದ್ಯಾರ್ಥಿನಿ.

‘ಶಿಕ್ಷಕರಿಗೆ ಬಾಟಲಿಯಲ್ಲಿ ನೀರು ತುಂಬಿಕೊಂಡು ಬರಲು ಸ್ನೇಹಿತರ ಜೊತೆಗೆ ಶಾಲೆಯಲ್ಲಿರುವ ಆರ್‌ಒ ವಾಟರ್‌ ಪ್ಯೂರಿಫೈರ್‌ ಬಳಿ ಹೋಗಿ ಸ್ವಿಚ್ ಹಾಕಿದಾಗ ತನುಶ್ರೀಗೆ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣ ಆಕೆಗೆ ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಸಿಂಧನೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿನಿಯು ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾಳೆ ಎಂದು ಶಿಕ್ಷಕರು ವಾದಿಸಿದ್ದರು. ಆದರೆ, ಇದನ್ನು ಒಪ್ಪದ ಪಾಲಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿನಿಯ ಮೃತದೇಹವನ್ನು ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದರು. ವಿದ್ಯಾರ್ಥಿನಿ ಎಡಗೈ ಬೆರಳುಗಳು ಶಾರ್ಟ್ ಸರ್ಕಿಟ್‌ನಿಂದ ಕಪ್ಪಾಗಿರುವುದು ಕಂಡು ಬಂದಿದೆ’ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಮೇರೆಗೆ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.