ADVERTISEMENT

ರಾಯಚೂರು: ₹ 20ಕ್ಕೆ ಕುಸಿದ ಎಳನೀರು ಬೆಲೆ!

ವಿಪರೀತ ಚಳಿಗೆ ಕಡಿಮೆಯಾದ ವ್ಯಾಪಾರ ವಹಿವಾಟು

ಚಂದ್ರಕಾಂತ ಮಸಾನಿ
Published 16 ಡಿಸೆಂಬರ್ 2025, 8:00 IST
Last Updated 16 ಡಿಸೆಂಬರ್ 2025, 8:00 IST
ರಾಯಚೂರಿನ ಮಾರುಕಟ್ಟೆಯಲ್ಲಿ ಫಲಕ ತೂಗು ಹಾಕಿ ಎಳನೀರು ಮಾರಾಟ ಮಾಡುತ್ತಿರುವ ವ್ಯಾಪಾರಿ ಅಬ್ದುಲ್‌ ರೌಫ್/ ಚಿತ್ರ: ಶ್ರೀನಿವಾಸ ಇನಾಂದಾರ್
ರಾಯಚೂರಿನ ಮಾರುಕಟ್ಟೆಯಲ್ಲಿ ಫಲಕ ತೂಗು ಹಾಕಿ ಎಳನೀರು ಮಾರಾಟ ಮಾಡುತ್ತಿರುವ ವ್ಯಾಪಾರಿ ಅಬ್ದುಲ್‌ ರೌಫ್/ ಚಿತ್ರ: ಶ್ರೀನಿವಾಸ ಇನಾಂದಾರ್   

ರಾಯಚೂರು: ಜಿಲ್ಲೆಯಲ್ಲಿ ತೀವ್ರ ಚಳಿ ಮುಂದುವರಿದಿರುವ ಕಾರಣ ಎಳನೀರಿನ ಬೆಲೆ ದಿಢೀರ್‌ ಕುಸಿತ ಕಂಡಿದೆ. ಆರು ತಿಂಗಳ ಹಿಂದೆ ₹70 ಇದ್ದ ಎಳನೀರು ಬೆಲೆ ಇದೀ ₹ 20ಗೆ ಕುಸಿದು ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಇಳುವರಿ ಕಡಿಮೆಯಾಗಿದ್ದರಿಂದ ಮಳೆಗಾಲದಲ್ಲೂ ಎಳನೀರಿನ ದರ ಕಡಿಮೆಯಾಗಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದವರು ಮಾತ್ರ ಖರೀದಿಸಿ ಸೇವಿಸುತ್ತಿದ್ದರು. ಈಗ ಅತಿಯಾದ ಚಳಿಯು ಎಳು ನೀರು ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಿದೆ.

ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 10ರಿಂದ 14 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದರೆ, ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿಸಿಲೂರಿನ ಜನರನ್ನು ತೀವ್ರತರ ಚಳಿ ಕಾಡುತ್ತಿದೆ. ಮಧ್ಯಾಹ್ನ ಬಿಸಿಲು ಇದ್ದರೂ ಅದು ಬೆಚ್ಚನೆಯ ಅನುಭೂತಿ ನೀಡುತ್ತಿದೆ. ಚಳಿಯಿಂದಾಗಿ ಎಳ ನೀರು ಸೇವಿಸುವುದು ಕಡಿಮೆಯಾಗಿದೆ.

ADVERTISEMENT

ತೆಂಗು ಬೆಳೆಗಾರರಿಂದ ಅಧಿಕ ಪ್ರಮಾಣದಲ್ಲಿ ಎಳನೀರು ಖರೀದಿಸಿರುವ ವ್ಯಾಪಾರಸ್ಥರು ನಗರದಲ್ಲೇ ಗೂಡ್ಸ್‌ ಆಟೊಗಳಲ್ಲಿ ಒಂದು ಸಣ್ಣ ಎಳನೀರಿಗೆ ₹20, ದೊಡ್ಡ ಎಳನೀರಿಗೆ ₹30ಗೆ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಖರೀದಿಸಿದ ಎಳನೀರು ಖಾಲಿಯಾದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ.

‘ಬೇಸಿಗೆಯಲ್ಲಿ ನಿತ್ಯ 600 ರಿಂದ 700 ಎಳೆ ನೀರು ಮಾರಾಟವಾಗುತ್ತಿತ್ತು. ಪ್ರಸ್ತುತ ಗರಿಷ್ಠ 40 ಎಳನೀರು ಮಾರಾಟವಾಗುತ್ತಿಲ್ಲ. ಸಗಟು ಮಾರುಕಟ್ಟೆಯಲ್ಲೂ ಎಳನೀರಿನ ದರ ಕುಸಿದಿದೆ. ತೀವ್ರ ಚಳಿಯಿಂದಾಗಿ ಎಳನೀರಿನ ಬೇಡಿಕೆ ಕಡಿಮೆಯಾಗಿದೆ’ ಎಂದು ವ್ಯಾಪಾರಿ ಅಬ್ದುಲ್ ರೌಫ್ ಹೇಳುತ್ತಾರೆ.

‘ಸೆಪ್ಟೆಂಬರ್‌ ವರೆಗೂ ಮಂಡ್ಯ ಜಿಲ್ಲೆಯ ಮದ್ದೂರಿನಿಂದ ರಾಯಚೂರಿಗೆ ನಿತ್ಯ ಎರಡು ಲಾರಿ ಎಳನೀರು ಬರುತ್ತಿದ್ದವು. ಈಗ ವಾರದಲ್ಲೇ ಒಂದೇ ಲಾರಿ ಬರುತ್ತಿದೆ. ಅಷ್ಟೇ ಅಲ್ಲ; ಬೇಡಿಕೆ ಸಲ್ಲಿಸಿದರೆ ಮಾತ್ರ ಲಾರಿಗಳು ಬರುತ್ತಿವೆ’ ಎನ್ನುತ್ತಾರೆ.

‘ವೈದ್ಯರ ಸಲಹೆ ಮೇರೆಗೆ ಕೆಲವರು ಬೆಳಗಿನ ಅವಧಿಯಲ್ಲಿ ಎಳನೀರು ಸೇವಿಸಲು ಬರುತ್ತಿದ್ದಾರೆ. ಆದರೆ, ಸಂಜೆ 4 ಗಂಟೆಯ ನಂತರ ಒಂದು ಎಳನೀರು ಮಾರಾಟವಾಗುತ್ತಿಲ್ಲ. ಬಿಸಿಲೂರಿನ ಜನ ತಪ್ಪು ಗ್ರಹಿಕೆಯಿಂದಾಗಿ ಚಳಿಗಾಲದಲ್ಲಿ ಸಂಜೆ ಎಳನೀರು ಸೇವಿಸುತ್ತಿಲ್ಲ’ ಎಂದು ವಿವರಿಸುತ್ತಾರೆ.

‘ರಾಯಚೂರು ನಗರದಲ್ಲಿ ಒಟ್ಟು 35 ನೋಂದಾಯಿತ ಎಳನೀರು ಮಾರಾಟಗಾರರು ಇದ್ದಾರೆ. ಮರದಿಂದ ಕೆಳಗಿಳಿಸಿದ ನಾಲ್ಕೈದು ದಿನಗಳಲ್ಲೇ ಎಳನೀರು ಮಾರಾಟ ಮಾಡಬೇಕು. ಇಲ್ಲದಿದ್ದರೆ ಅದರ ಸ್ವಾದ ಕಡಿಮೆಯಾಗುತ್ತದೆ. ಹೀಗಾಗಿ ನಾವು ಸಹ ಹೆಚ್ಚು ತರಿಸುತ್ತಿಲ್ಲ’ ಎಂದು ಹೇಳುತ್ತಾರೆ.

ಬೇಸಿಗೆಯಲ್ಲಿ ₹70 ಆಗಿದ್ದ ಎಳನೀರು

ಬೇಸಿಗೆಯಲ್ಲಿ ಬಿಸಿಲ ಝಳ ತಾಳಲಾರದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದರು. ಆಗ ಎಳನೀರು ₹70ಕ್ಕೆ ತಲುಪಿದಾಗ ಬೆಲೆ ಕೇಳಿಯೇ ಗ್ರಾಹಕರು ಹೌಹಾರುತ್ತಿದ್ದರು. ಪರ್ಯಾಯವಾಗಿ ಹಣ್ಣಿನ ರಸ ಸೇವಿಸಲು ಆರಂಭಿಸಿದ್ದರು. ಈಗ ಎಳನೀರು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದರೂ ವಾತಾವರಣ ಹಿಂಜರಿಯುವಂತೆ ಮಾಡಿದೆ.

ಎಳನೀರು ಮಾರಾಟಗಾರರು ಅಲ್ಲಿ ಫಲಕಗಳನ್ನು ಹಾಕಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ದೊಡ್ಡ ಕಾಯಿಗಳನ್ನು ನೂರು ರೂಪಾಯಿಗೆ ಮೂರು ಮಾರಾಟ ಮಾಡುತ್ತಿದ್ದಾರೆ. ಚಿಕ್ಕ ಗಾತ್ರದ ಕಾಯಿಗಳನ್ನು ₹20ಗೆ ಕೊಡುತ್ತಿದ್ದಾರೆ. ₹100ಗೆ ಅತಿ ದೊಡ್ಡ ಮೂರು ಕಾಯಿಗಳು ಮಾರಾಟಕ್ಕಿವೆ.

ರಾಯಚೂರಲ್ಲಿ ಮಾರಾಟಕ್ಕೆ ಇಡಲಾದ ಎಳನೀರು

ರಾಯಚೂರು ನಗರದಲ್ಲಿ ಅಧಿಕೃತ ಮಾರಾಟಗಾರರು 35 40 ಎಳನೀರು ಸಹ ನಿತ್ಯ ಮಾರಾಟವಾಗುತ್ತಿಲ್ಲ ವಾರಕ್ಕೆ ಬರುತ್ತಿರುವ ಲಾರಿಗಳು ಕೇವಲ 2

ಎಳನೀರು ಜೀವಾಮೃತ ಇದ್ದಂತೆ. ರೋಗಿಗಳು ಎಳನೀರು ಸೇವಿಸಲು ಬರುತ್ತಿದ್ದಾರೆ. ಆದರೆ ಆರೋಗ್ಯವಂತರು ಚಳಿಗೆ ಹೆದರಿ ಹಿಂಜರಿಯುತ್ತಿದ್ದಾರೆ
ಅಬ್ದುಲ್‌ ರೌಫ್ ಎಳನೀರು ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.