ರಾಯಚೂರು: ‘ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಯಚೂರು ಉತ್ಸವ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಇಲ್ಲಿಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
‘ರಾಯಚೂರು ಉತ್ಸವ ನಡೆಸಬೇಕು ಎನ್ನುವ ಬೇಡಿಕೆ ಇದೆ. ಜಿಲ್ಲೆಯ ಕಲಾವಿದರೂ ಉತ್ಸುಕರಾಗಿದ್ದಾರೆ. ಸಿದ್ಧತೆ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ‘ ಎಂದು ತಿಳಿಸಿದರು.
‘ಕಲ್ಯಾಣ ಕರ್ನಾಟಕದ ಉತ್ಸವ ಕೇವಲ ಕಲಬುರ್ಗಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅವರು ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಪ್ರತಿ ವರ್ಷ ಸರತಿಯಂತೆ ಧ್ವಜಾರೋಹಣ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು‘ ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜಕೀಯ ಮಾಡುವುದನ್ನು ನಿಲ್ಲಿಸಲಿ:
‘ಕೃಷ್ಣಾ ನ್ಯಾಯಾಧೀಕರಣ-೨ರ ಆದೇಶದಂತೆ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಕರ್ನಾಟಕಕ್ಕೆ ಹಕ್ಕು ಇದೆ. ಈ ನಿರ್ಧಾರವನ್ನು 2013 ರಲ್ಲಿ ನ್ಯಾಯಾಧೀಕರಣ-೨ರ ತೀರ್ಪಿನಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರಿ 75 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ನಿರ್ಧಿರಿಸಿ ರೈತರಿಗೆ ನ್ಯಾಯಯುತವಾದ ಪರಿಹಾರ ಒದಗಿಸಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಕೇಂದ್ರ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಬೇಕು‘ ಎಂದು ಸಚಿವರು ಒತ್ತಾಯಿಸಿದರು.
‘ರಾಜ್ಯದ ಪ್ರತಿಷ್ಠಿತ ನೀರಾವರಿ ಯೋಜನೆಗೆ ₹ 70 ಸಾವಿರ ಕೋಟಿ ಬೇಕಾಗಬಹುದು. ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ‘ ಎಂದು ತಿಳಿಸಿದರು.
ಬಿಜೆಪಿ ಚಾಳಿ:
‘ಬಿಜೆಪಿ ಮುಖಂಡರು ಗಣೇಶನ ಹಬ್ಬವನ್ನೇ ರಾಜಕೀಯ ಬಳಸಿಕೊಂಡರು. ಇದೀಗ ಜಾತಿ ಸಮೀಕ್ಷೆ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ. ವಿವಾದ ಸೃಷ್ಟಿಸುವುದು ಬಿಜೆಪಿ ಚಾಳಿಯಾಗಿದೆ‘ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.