ಸಿರವಾರ : ತಾಲ್ಲೂಕಿನ ಕೆ.ಗುಡದಿನ್ನಿ ಗ್ರಾಮದ ಸೀಮಾದಲ್ಲಿರುವ 47 ಎಕರೆ 29 ಗುಂಟೆ ಸರ್ಕಾರಿ ಭೂಮಿಯನ್ನು ಕಂದಾಯ ಅಧಿಕಾರಿಯು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದು, ಅಕ್ರಮಕ್ಕೆ ಕಾರಣವಾಗಿ ಕಂದಾಯ ಅಧಿಕಾರಿ ವಿರುದ್ದ ಕ್ರಮಕೈಗೊಂಡು ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಬೊಮ್ಮನಾಳ ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೆ.ಗುಡದಿನ್ನಿ ಗ್ರಾಮದ ಸೀಮಾದಲ್ಲಿನ ಸರ್ವೇ ನಂ.11/ಅ, 11/ಆ ಮತ್ತು 52 ರಲ್ಲಿನ 47 ಎಕರೆ 29 ಗುಂಟೆ ಭೂಮಿಯನ್ನು ವಂಶಾವಳಿ ಸೇರಿದಂತೆ ಅಗತ್ಯವಾದ ದಾಖಲೆಗಳನ್ನು ನಕಲಿ ಸೃಷ್ಟಿಸಿ ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ.
1970 ಕ್ಕಿಂತ ಮುಂಚೆ ಚಾಚುಬಾಯಿ ರಾಘವೇಂದ್ರರಾವ್ ತಂದೆ ಶ್ರೀನಿವಾಸರಾವ್ ಕಡದಿನ್ನಿ ಎಂಬ ಬ್ರಾಹ್ಮಣ ಜಾತಿಯವರ ಹೆಸರಿನಲ್ಲಿತ್ತು, ಆದರೆ ಈ ಕುಟುಂಬ ಸದಸ್ಯರು 50 ವರ್ಷಗಳಿಂದ ನಾಪತ್ತೆ ಇದ್ದ ಕಾರಣ ಸರ್ಕಾರ ಸದರಿ ಜಮೀನನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು ಆದರೆ 2017 ರಲ್ಲಿ ಸಿರವಾರ ತಹಶೀಲ್ದಾರ್ ಕಚೇರಿಯ ಕಂದಾಯ ಅಧಿಕಾರಿಗಳ ಕುತಂತ್ರದಿಂದ ಕೃಷ್ಣ ಕುಮಾರ ಚಂಪಲಾಲ್ ಎಂಬ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ವರ್ಗಾಯಿಸಿದ ಕಂದಾಯ ಅಧಿಕಾರಿಗಳನ್ನು ಅಮಾನತ್ ಮಾಡಬೇಕು ಹಣದ ಪಡೆದ ಅಕ್ರಮಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ಜನೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರೈತ ಸಂಘ (ಕೆಆರ್ ಎಸ್) ಸಂಘಟನೆಯ ಹುಲಿಗೆಪ್ಪ ಮಡಿವಾಳ, ಹನುಮಂತ ಕುಂಬಾರ, ವೀರೇಶ ನಾಯಕ, ಶಿವಯ್ಯ ಲಕ್ಕಂದಿನ್ನಿ, ಶಿವರಾಜ ದೊಡ್ಡಿ, ಮಲ್ಲಯ್ಯ ಲಕ್ಕಂದಿನ್ನಿ, ಮಲ್ಲೇಶ ಮದ್ಲಾಪೂರ, ಗೌರಪ್ಪ, ಮೌಲಪ್ಪ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.