ADVERTISEMENT

ಬಿಸಿಲಿನ ತಾಪಕ್ಕೆ ‘ಗೃಹಜ್ಯೋತಿ’ ಲೆಕ್ಕಕ್ಕಿಲ್ಲ!

ಫ್ಯಾನ್, ಏರ್‍ಕೂಲರ್, ಎಸಿ ಬಿಟ್ಟಿರದ ಜನತೆ | ಕರೆಂಟ್ ತೆಗೆದರೆ ಜೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 7:44 IST
Last Updated 4 ಏಪ್ರಿಲ್ 2024, 7:44 IST
ವಿದ್ಯುತ್ ಬಲ್ಬ್‍ನ ಚಿತ್ರ
ವಿದ್ಯುತ್ ಬಲ್ಬ್‍ನ ಚಿತ್ರ   

ಗೃಹಜ್ಯೋತಿ ಯೋಜನೆಯ ಪ್ರತಿಫಲವಾಗಿ ಒಂದು ವರ್ಷಗಳಿಂದ ವಿದ್ಯುತ್ ಬಿಲ್ ಶೂನ್ಯ ಬರುತ್ತಿತ್ತು. ಆದರೆ, ಈ ಬಿಸಿಲಿನ ತಾಪದಿಂದ ಹೆಚ್ಚಾಗಿ ಫ್ಯಾನ್, ಏರ್‌ಕೂಲರ್‌, ಎಸಿ ಬಳಸುತ್ತಿರುವುದರಿಂದ ಮಾರ್ಚ್ ತಿಂಗಳ ಬಿಲ್ ₹1080 ಬಂದಿರುವುದು ಆಶ್ಚರ್ಯ ಮೂಡಿಸಿದೆ

–ಕೊಟ್ರಪ್ಪ ಸರ್ಕಾರಿ ನೌಕರ

ಗೃಹಜ್ಯೋತಿ ಫಲಾನುಭವಿ ಆಗಿದ್ದರೂ ಸಹ ಶೂನ್ಯ ಬಿಲ್‍ನೊಂದಿಗೆ ₹110, ₹115 ಬಿಲ್ ಬರುತ್ತಿತ್ತು. ಆದರೆ, ಮಾರ್ಚ್ ತಿಂಗಳ ಕರೆಂಟ್ ಬಿಲ್ ₹1600 ಬಂದಿರುವುದಕ್ಕೆ ಬಿಸಿಲಿನ ತಾಪ ತಾಳಲಾರದೆ ಫ್ಯಾನ್, ಏರ್‍ಕೂಲರ್ ಬಳಸಿದ್ದೇ ಕಾರಣವಾಗಿದೆ

ADVERTISEMENT

0–ನಾಗಲಕ್ಷ್ಮಿ ಶರಣಬಸವೇಶ್ವರ ಕಾಲೊನಿ ನಿವಾಸಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನವು 40ಕ್ಕಿಂತ ಹೆಚ್ಚಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಮನೆಯಲ್ಲಿ ಸದಾ ಫ್ಯಾನ್, ಏರ್‌ಕೂಲರ್‌, ಎಸಿ ಉಪಯೋಗಿಸುವುದು ಸಹಜ. ಆದ್ದರಿಂದ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಮಿತಿಗಿಂತ ಹೆಚ್ಚು ಬಳಸಿದರೂ ರಾಜ್ಯ ಸರ್ಕಾರವು ಶೂನ್ಯ ರಿಯಾಯಿತಿ ನೀಡಬೇಕು

–ನಾಗರಾಜ್ ಪೂಜಾರ್ ಜಿಲ್ಲಾ ಸಂಚಾಲಕ ಎಐಸಿಸಿಟಿಯು

ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳು ನಿಗದಿಯಂತೆ 200 ಯೂನಿಟ್‍ಗಿಂತ ಹೆಚ್ಚಾಗಿ ವಿದ್ಯುತ್ ಉಪಯೋಗಿಸಿದರೆ, ಎಲ್ಲ ಯೂನಿಟ್ ಬಳಕೆಗೂ ಬಿಲ್ ಕಟ್ಟಬೇಕಿರುವುದು ಕಡ್ಡಾಯ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟ ಆದೇಶವಿದೆ

–ಶ್ರೀನಿವಾಸ ಜಿ. ಎಇಇ ಜೆಸ್ಕಾಂ ಸಿಂಧನೂರು

ಸಿಂಧನೂರು: ತಿಂಗಳಿನಿಂದ ಬೇಸಿಗೆ ಕಾಲ ಆರಂಭವಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ
ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆ ಲೆಕ್ಕಕ್ಕಿಲ್ಲಂದಂತಾಗಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಯಡಿ ಸಿಂಧನೂರು ನಗರದಲ್ಲಿ 43 ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 51,150ಕ್ಕೂ ಹೆಚ್ಚು ಕುಟುಂಬಗಳು ಲಾಭ ಪಡೆಯುತ್ತಿವೆ. 200 ಯೂನಿಟ್‍ವರೆಗೆ ಉಚಿತ್ ವಿದ್ಯುತ್ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಿಂದ ಜನರಿಗೆ ಅತ್ಯಂತ ಅನುಕೂಲ ಆಗಿದೆ. ಪ್ರತಿ ತಿಂಗಳು ಕನಿಷ್ಠ ₹500 ಕ್ಕಿಂತ ಹೆಚ್ಚು ಬಿಲ್ ಕಟ್ಟುತ್ತಿದ್ದವರು ಈ ಯೋಜನೆಯಿಂದ ಒಂದು ರೂಪಾಯಿಯನ್ನೂ ಪಾವತಿಸದೇ ನೆಮ್ಮದಿಯಿಂದ ಇದ್ದರು.

ಆದರೆ, ಕಳೆದೊಂದು ತಿಂಗಳಿಂದ ಬೇಸಿಗೆಯ ಬಿಸಿಲಿನ ಪ್ರಖರತೆ ಜನರನ್ನು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ. ಒಂದು ವಾರದಿಂದ ತಾಲ್ಲೂಕಿನಲ್ಲಿ 41ರಿಂದ 44 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪ ಇರುವುದು ಹವಾಮಾನ ಇಲಾಖೆಯಿಂದ ವರದಿಯಾಗಿದೆ.

ಹೀಗಾಗಿ ದಿನದ 24 ಗಂಟೆಗಳಲ್ಲಿ ನಾಲ್ಕೈದು ತಾಸು ಬಿಟ್ಟರೆ ಉಳಿದೆಲ್ಲ ಸಮಯವನ್ನು ಸಾರ್ವಜನಿಕರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಫ್ಯಾನ್, ಏರ್‌ಕೂಲರ್, ಎಸಿ ಸದಾ ಉಪಯೋಗಿಸಲಾಗುತ್ತಿದೆ. ರಾತ್ರಿ ಸಮಯದಲ್ಲಂತೂ ಫುಲ್ ಸ್ಪೀಡ್‍ನಲ್ಲಿ ಫ್ಯಾನ್ ತಿರುಗಿ ತಂಪು ನೀಡುತಲೇ ಇರಬೇಕು. ಒಂದು ವೇಳೆ ಕರೆಂಟ್ ಹೋದರೆ ಕುಟುಂಬ ಸಮೇತ ಮನೆಯ ಹೊರಭಾಗದಲ್ಲಿ ಕರೆಂಟ್ ಬರುವವರೆಗೂ ಕುಳಿತುಕೊಳ್ಳುವ ಪರಿಸ್ಥಿತಿಯಿದೆ.

ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ನಿಗದಿಪಡಿಸಿರುವ 200 ಯೂನಿಟ್ ವಿದ್ಯುತ್ ಬಳಕೆಯ ಮಿತಿಯೂ ಮೀರುತ್ತಿದೆ. ಇದರಿಂದ ಫಲಾನುಭವಿಗಳು ಎಲ್ಲ ಯೂನಿಟ್‍ಗೂ ವಿದ್ಯುತ್ ಬಿಲ್ ಪಾವತಿಸುವಂತಾಗಿದೆ. ಇಷ್ಟು ದಿನ ಶೂನ್ಯವಾಗಿದ್ದ ಕರೆಂಟ್ ಬಿಲ್ ಈಗ ತಿಂಗಳಿಗೆ ₹1000 ರಿಂದ ₹2000 ರವರೆಗೆ ಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಬಿಸಿಲಿಗಿಂತ ಕರೆಂಟ್ ಬಿಲ್‍ನ ಬಿಸಿ ಜಾಸ್ತಿಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.