ADVERTISEMENT

ಮಸ್ಕಿ: ಹಳ್ಳದಲ್ಲಿ ಕೊಚ್ಚಿಹೋದ ಒಬ್ಬ ಯುವಕ, ಮೂವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 8:12 IST
Last Updated 11 ಅಕ್ಟೋಬರ್ 2020, 8:12 IST
ಕಾರ್ಯಾಚಾರಣೆಯಲ್ಲಿ ತೊಡಗಿರುವ ಸಿಬ್ಬಂದಿ
ಕಾರ್ಯಾಚಾರಣೆಯಲ್ಲಿ ತೊಡಗಿರುವ ಸಿಬ್ಬಂದಿ   

ಮಸ್ಕಿ (ರಾಯಚೂರು ಜಿಲ್ಲೆ): ಪಟ್ಟಣದಲ್ಲಿ ಏಕಾಏಕಿ ಹರಿದು ಬಂದ ಹಳ್ಳದಲ್ಲಿ ಅಪಾಯಕ್ಕೆ ಸಿಲುಕಿದ್ದ ನಾಲ್ಕು ಜನರ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಕೊಚ್ಚಿ ಹೋಗಿರುವ ಒಬ್ಬ ಯುವಕನ ಶೋಧ ಆರಂಭಿಸಲಾಗಿದೆ.

ಪಟ್ಟಣ ನಿವಾಸಿ ಚನ್ನಬಸವ ಕೊಚ್ಚಿಹೋಗಿರುವ ಯುವಕ. ಸ್ಥಳದಲ್ಲಿ ಜನರು ಭಾರಿಸಂಖ್ಯೆಯಲ್ಲಿ ಜಮಾಯಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಘಟನೆಯ ವಿವರ: ಸಂಪೂರ್ಣ ಖಾಲಿಯಾಗಿದ್ದ ಹಳ್ಳದ ಪೊದೆಗಳ ಪಕ್ಕದಲ್ಲಿ ಭಾನುವಾರ ನಸುಕಿನಲ್ಲಿ ಬಹಿರ್ದೆಸೆ ಹೋಗಿದ್ದ ಚನ್ನಬಸವ ಮತ್ತು ಜಲೀಲ್‌ ಅವರು ಏಕಾಏಕಿ ಹರಿದುಬಂದ ಹಳ್ಳದ ನೀರಿನ ಮಧ್ಯೆ ಸಿಲುಕಿದ್ದರು. ಕಲ್ಲುಬಂಡೆಗಳ ಮೇಲೆ ಪ್ರತ್ಯೇಕವಾಗಿ ನಿಂತಿದ್ದ ಇಬ್ಬರು ಯುವಕರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದರು.

ADVERTISEMENT

ಸ್ಥಳೀಯ ವ್ಯಕ್ತಿ ಸೇರಿ ಮೂವರು ಅಗ್ನಿಶಾಮಕ ಸಿಬ್ಬಂದಿಯು ಚನ್ನಬಸವನನ್ನು ಹಗ್ಗದ ನೆರವಿನಿಂದ ಸುರಕ್ಷಿತ ಜಾಗಕ್ಕೆ ಕರೆತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಗ್ಗ ತುಂಡಾಗಿ ನಾಲ್ಕು ಜನರು ಹಳ್ಳದಲ್ಲಿ ಕೊಚ್ಚಿಹೋದರು. ಸ್ಥಳೀಯ ವ್ಯಕ್ತಿ ಈಜಿಕೊಂಡು ಪಾರಾದರು. ಚನ್ನಬಸವ ಮಾತ್ರ ಕೊಚ್ಚಿಕೊಂಡು ಹೋದ. ಪೊದೆಗಳ ಆಶ್ರಯ ಪಡೆದಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಕೂಡಾ ಅಪಾಯಕ್ಕೆ ಸಿಲುಕಿದ್ದರು. ಸಾರ್ವಜನಿಕರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಹಳ್ಳದಲ್ಲಿ ಸಿಲುಕಿದ್ದ ಜಲೀಲ್‌ ಹಾಗೂ ಇಬ್ಬರು ಅಗ್ನಿಶಾಮಕ ಸಿಬ್ಬಂದಿಯನ್ನು ಕ್ರೇನ್‌ ಯಂತ್ರವನ್ನು ಬಳಸಿ ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.