ADVERTISEMENT

ಮಾನ್ವಿ: ಹಂಚಿಕೆಯಾಗದ ‘ಆಸರೆ’ ಮನೆಗಳು

ತುಂಗಭದ್ರಾ ನದಿಪಾತ್ರದ ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ವಿಫಲ

ಬಸವರಾಜ ಬೋಗಾವತಿ
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST
ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ಸ್ಥಳಾಂತರಕ್ಕಾಗಿ ನಿರ್ಮಿಸಲಾದ ಆಸರೆ ಮನೆಗಳು ಹಂಚಿಕೆಯಾಗದೆ ಪಾಳು ಬಿದ್ದಿವೆ
ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದ ಸ್ಥಳಾಂತರಕ್ಕಾಗಿ ನಿರ್ಮಿಸಲಾದ ಆಸರೆ ಮನೆಗಳು ಹಂಚಿಕೆಯಾಗದೆ ಪಾಳು ಬಿದ್ದಿವೆ   

ಮಾನ್ವಿ: ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಚೀಕಲಪರ್ವಿ ಹಾಗೂ ದೇವಿಪುರ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕಾಗಿ ನಿರ್ಮಿಸಲಾದ ಆಸರೆ ಮನೆಗಳು ದಶಕ ಕಳೆದರೂ ಹಂಚಿಕೆಯಾಗದಿರುವುದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ತುಂಗಭದ್ರಾ ಜಲಾಶಯದಿಂದ ಮಂಗಳವಾರದಿಂದ 1.30ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಟ್ಟಿರುವ ಕಾರಣ ತಾಲ್ಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರವಾಹ ಭೀತಿ ಉಂಟಾಗಿದೆ.

ತಾಲ್ಲೂಕಿನ ಶಾಶ್ವತ ನೆರೆಪೀಡಿತ ಗ್ರಾಮಗಳ ಹಣೆಪಟ್ಟಿ ಹೊಂದಿರುವ ದೇವಿಪುರ, ಯಡಿವಾಳ, ಜಾಗೀರಪನ್ನೂರು, ಚೀಕಲಪರ್ವಿ, ಕಾತರಕಿ, ದದ್ದಲ, ಉಮಳಿಪನ್ನೂರು, ಜೂಕೂರು ಗ್ರಾಮಗಳ ಜನರಲ್ಲಿ ಮತ್ತೆ ಆಂತಕ ಶುರುವಾಗಿದೆ.

ADVERTISEMENT

2009ರಲ್ಲಿ ಭೀಕರ ನೆರೆಹಾವಳಿ ಸಂಭವಿಸಿದಾಗ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗ್ರಾಮಗಳ ಹೊರವಲಯಗಳಲ್ಲಿ ಜಮೀನುಗಳನ್ನು ಖರೀದಿಸಿ ಸುಸಜ್ಜಿತ ಆಸರೆ ಮನೆಗಳನ್ನು ನಿರ್ಮಿಸಿ ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ ಚೀಕಲಪರ್ವಿ ಗ್ರಾಮದ ಸ್ಥಳಾಂತರಕ್ಕಾಗಿ ನಿರ್ಮಿಸಲಾಗಿದ್ದ 554 ಆಸರೆ ಮನೆಗಳು ಇದುವರೆಗೂ ಗ್ರಾಮಸ್ಥರಿಗೆ ಹಂಚಿಕೆಯಾಗಿಲ್ಲ. ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಮನೆಗಳ ನಿರ್ಮಾಣ ಮಾಡದಿರುವುದು ಹಂಚಿಕೆಯ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ದೇವಿಪುರ ಗ್ರಾಮದಲ್ಲಿ ನಿರ್ಮಿಸಲಾಗಿದ್ದ 138 ಆಸರೆ ಮನೆಗಳು ಹಕ್ಕುಪತ್ರಗಳನ್ನು ಗ್ರಾಮಸ್ಥರಿಗೆ ನೀಡಲಾಗಿದೆ. ಆದರೆ ಈ ಗ್ರಾಮದ ಮುಖ್ಯ ರಸ್ತೆಯಿಂದ ಆಸರೆ ಮನೆಗಳ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಿಸದ ಕಾರಣ ಗ್ರಾಮಸ್ಥರು ಸ್ಥಳಾಂತರಕ್ಕೆ ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದಶಕ ಕಳೆದರೂ ಬಳಕೆಯಾಗದ ಕಾರಣ ಈ ಎರಡು ಗ್ರಾಮಗಳಲ್ಲಿ ನಿರ್ಮಾಣಗೊಂಡ ಆಸರೆ ಮನೆಗಳು ಈಗ ಪಾಳು ಬಿದ್ದಿವೆ. ಗ್ರಾಮಸ್ಥರು ಈಗಲೂ ನದಿದಡದ ಪ್ರದೇಶ ವ್ಯಾಪ್ತಿಯ ತಮ್ಮ ಹಳೆಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಕಾರಣ ಪ್ರತಿ ವರ್ಷ ಪ್ರವಾಹ ಸಂದರ್ಭದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.

ಹತ್ತು ವರ್ಷಗಳಿಂದ ಅಧಿಕಾರಿಗಳು ಈ ಎರಡು ಗ್ರಾಮಗಳ ಗ್ರಾಮಸ್ಥರ ಜತೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿರುವುದು ಸಂದೇಹಕ್ಕೆ ಕಾರಣವಾಗಿದೆ. ಆದಷ್ಟು ಬೇಗನೆ ಮನೆಗಳ ಹಂಚಿಕೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

***

ಚೀಕಲಪರ್ವಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಆಸರೆ ಮನೆಗಳ ಹಕ್ಕುಪತ್ರಗಳ ವಿತರಣೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.

-ಸಂತೋಷರಾಣಿ, ತಹಶೀಲ್ದಾರ್, ಮಾನ್ವಿ

***

ದೇವಿಪುರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ಆಸರೆ ಮನೆಗಳ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಗಮನಹರಿಸಬೇಕು

-ಹನುಮಂತಪ್ಪ ನಾಯಕ ವಕೀಲ, ದೇವಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.