ರಾಯಚೂರು: ಆರ್‌ಬಿಎಸ್‌ಕೆ ವೈದ್ಯಕೀಯ ತಂಡವು ಕ್ಷೇತ್ರ ಮಟ್ಟದಲ್ಲಿ ಗುರುತಿಸಿದ ನ್ಯೂನ್ಯತೆಯುಳ್ಳ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಶುಕ್ರವಾರ ನಡೆಯಿತು.
ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ ಹುಟ್ಟಿನಿಂದ 18 ವರ್ಷದೊಳಗಿನ ಜನ್ಮಜಾತ ಹೃದಯ ಖಾಯಿಲೆಯ 14 ಮಕ್ಕಳು, ಸೀಳು ತುಟಿ, ಸೀಳು ಅಂಗಳದ 3 ಮಕ್ಕಳನ್ನು ಡಾ.ಇಮ್ರಾನ್ ತಪಾಸಣೆ ಮಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 12 ಆರ್‌ಬಿಎಸ್‌ಕೆ ವೈದ್ಯಕೀಯ ತಂಡಗಳ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತಂಡದಲ್ಲಿ ವೈದ್ಯರು, ಶುಶ್ರೂಷಕರು, ನೇತ್ರಾಧಿಕಾರಿಗಳು ಇದ್ದಾರೆ. ಅಂಗನವಾಡಿ, ಶಾಲೆಗಳಲ್ಲಿ ತಪಾಸಣೆ ನಡೆಸಿ ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಜ್ವಲಕುಮಾರ ನೇತೃತ್ವದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಮಕ್ಕಳ ತಜ್ಞರಿಂದ ತಪಾಸಣೆ ಮಾಡುತ್ತಾರೆ. ಇದಕ್ಕೆ ನವೋದಯ ಹಾಗೂ ರಿಮ್ಸ್ ಆಸ್ಪತ್ರೆಯ ತಜ್ಞರು ಸಹಕಾರ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಪಾಲಕರು ತಮ್ಮ ಮಗುವಿಗೆ ಆರೋಗ್ಯ ಸಮಸ್ಯೆಗಳಿಗೆ ಹಲವು ಬಾರಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ವೆಚ್ಚ ಕರ್ಚು ಮಾಡಿ ಆರ್ಥಿಕ ತೊಂದರೆಗೊಳಗಾಗುವುದನ್ನು ತಪ್ಪಿಸಲು ಸರ್ಕಾರ ಅನುಷ್ಠಾನ ಮಾಡಿರುವ ಯೋಜನೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ: ಮಕ್ಕಳ ಬೆಳವಣಿಗೆಗೆ ಕಾರಣವಾಗುವ ನಾಲ್ಕು ಕಾರಣಗಳನ್ನು ಗುರುತಿಸಿ ಮಕ್ಕಳ ತಜ್ಞರು, ಕಿವಿ, ಮೂಗು ಹಾಗೂ ಗಂಟಲು ತಜ್ಞರು, ಮಾನಸಿಕ ತಜ್ಞರು, ಪಿಜಿಯೊಥೆರಪಿಸ್ಟ್ ಅವರು ಅಗತ್ಯ ಚಿಕಿತ್ಸೆ, ಸಲಹೆಗಳನ್ನು ನೀಡುತ್ತಾರೆ. ಪ್ರಸ್ತುತ ಪ್ರತಿದಿನ 15 ರಿಂದ20 ಮಕ್ಕಳು ಕೇಂದ್ರದ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ: ಜನ್ಮಾಜಾತ ಹೃದಯ ಸಂಬಂಧಿ ಕಾಯಿಲೆಗಳ ತುರ್ತು ಶಸ್ತ್ರಚಿಕಿತ್ಸೆಗಳಿಗಾಗಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ಆರ್‌ಸಿಎಚ್ ಅಧಿಕಾರಿ ಡಾ.ನಂದೀತಾ ಎಂ.ಎನ್. ಮಾತನಾಡಿದರು.
ಡಾ.ಸಂಧ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಹಿರಿಯ ಶುಶ್ರೂಷಣಾಧಿಕಾರಿ ಸಲೋಮಿ, ಡಿವೈಎಚ್‌ಇಒ ಬಸಯ್ಯ, ಡಿಪಿಎಂ ನವೀನಕುಮಾರ, ಸಿದ್ದಮ್ಮ, ಬಿಎಚ್‌ಇಒ ಸರೋಜಾ ಕೆ, ಡಿಇಐಸಿ ತಂಡದ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.