ADVERTISEMENT

1,432 ಮಾದರಿಗಳ ವರದಿ ನಿರೀಕ್ಷೆ

ಜಿಲ್ಲೆಯಲ್ಲಿ ಕೊರೊನಾ ಆತಂಕದಲ್ಲಿಯೇ ಸಂಚರಿಸುತ್ತಿರುವ ಜನರು

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 14:41 IST
Last Updated 10 ಜೂನ್ 2020, 14:41 IST
ರಾಯಚೂರಿನ ಒಪೆಕ್‌ ಆಸ್ಪತ್ರೆ
ರಾಯಚೂರಿನ ಒಪೆಕ್‌ ಆಸ್ಪತ್ರೆ   

ರಾಯಚೂರು: ಜಿಲ್ಲೆಯಿಂದ ಇದುವರೆಗೆ 17,757 ಜನರ ಗಂಟಲಿನ ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 15,960 ವರದಿಗಳು ನೆಗೆಟಿವ್ ಆಗಿವೆ. ಉಳಿದ 1,432 ಮಾದರಿಗಳ ಫಲಿತಾಂಶ ಬರಬೇಕಿದೆ.

ಜೂನ್‌ 10 ರಂದು 125 ಮಾದರಿಗಳನ್ನು ಕಳುಹಿಸಲಾಗಿದ್ದು, ಅವುಗಳಲ್ಲಿ ದೇವದುರ್ಗ ತಾಲ್ಲೂಕಿನಿಂದ 9, ಲಿಂಗಸುಗೂರು ತಾಲ್ಲೂಕಿನಿಂದ 25, ಮಾನ್ವಿ ತಾಲ್ಲೂಕಿನಿಂದ 5, ಸಿಂಧನೂರು ತಾಲ್ಲೂಕಿನಿಂದ 23 ಮತ್ತು ರಾಯಚೂರು ತಾಲ್ಲೂಕಿನಿಂದ 63 ಜನರ ಗಂಟಲಿನ ದ್ರವ ಮಾದರಿಯನ್ನು ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ವರದಿಗಾಗಿ ಕಳುಹಿಸಲಾಗಿದ್ದ ಮಾದರಿಗಳಲ್ಲಿ ಗುರುವಾರ ಬಂದಿರುವ 214 ವರದಿಗಳೆಲ್ಲವೂ ನೆಗೆಟಿವ್ ಆಗಿವೆ. ಜಿಲ್ಲೆಯ ವಿವಿಧೆಡೆ ಇರುವ ಫಿವರ್ ಕ್ಲಿನಿಕ್‌ಗಳಲ್ಲಿ 210 ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 359 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೋವಿಡ್-19 ದೃಢಪಟ್ಟು ಆಸ್ಪತ್ರೆಗೆ ದಾಖಲಿಸಲಾಗಿದ್ದವರ ಪೈಕಿ 82 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ADVERTISEMENT

ದಾದಿಗೆ ಕೋವಿಡ್‌: ಒಪೆಕ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ದಾದಿಯೊಬ್ಬರಿಗೆ ಕೋವಿಡ್‌ ದೃಢಪಟ್ಟಿದೆ ಎನ್ನುವ ಮಾಹಿತಿ ಇದೆ. ಆದರೆ, ರಾಜ್ಯದಿಂದ ಬಿಡುಗಡೆ ಮಾಡುವ ವರದಿ ಮೂಲಕ ಇನ್ನೂ ದೃಢಪಡಿಸಿಲ್ಲ. ರಿಮ್ಸ್‌ನಲ್ಲಿರುವ ಪ್ರಯೋಗಾಲಯದಲ್ಲಿ ಪ್ರಾಥಮಿಕವಾಗಿ ಪರೀಕ್ಷೆ ಮಾಡಿದಾಗ, ಕೋವಿಡ್‌ ಪತ್ತೆಯಾಗಿದೆ. ಆದರೆ, ಅದನ್ನು ದೃಢ ಮಾಡಿಕೊಳ್ಳಲು ಮಾದರಿಯನ್ನು ಮತ್ತೊಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

ಐಸೋಲೇಷನ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ದಾದಿಯರು ಮತ್ತು ಸಿಬ್ಬಂದಿ ಕೋವಿಡ್‌ ರೋಗಿಗಳ ಸಂಪರ್ಕಕ್ಕೆ ಬಂದಿರುವ ಬಗ್ಗೆ ಮಾಹಿತಿ ಇದ್ದರೂ ಹೋಂ ಕ್ವಾರಂಟೈನ್‌ ಕಳುಹಿಸುತ್ತಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ. ಇದೀಗ ಐಸೋಲೇಷನ್‌ ವಾರ್ಡ್‌ನಲ್ಲಿ ಕೆಲಸ ಮಾಡುವವರಲ್ಲಿಯೂ ಆತಂಕ ಮೂಡಿದಂತಾಗಿದೆ. ಸುರಕ್ಷತೆ ಕ್ರಮಗಳನ್ನು ಮತ್ತಷ್ಟು ಬಿಗಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.