ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ರಾಶಿ ಮಾಡಿ ಬಯಲು ಜಾಗದಲ್ಲಿ ಹಾಕಿದ್ದ ರೈತರು ಅಕಾಲಿಕ ಮಳೆಯಿಂದ ತೊಗರಿ ಕಾಪಾಡಲು ಇಡೀ ರಾತ್ರಿ ಪರದಾಡಿದರು.
ತೊಗರಿ ಕಟಾವು ಭರದಿಂದ ಸಾಗಿದ್ದು ಹಲವು ರೈತರು ತೊಗರಿ ಕಟಾವು ಮಾಡಿ ಬಿಸಿಲಿಗೆ ಒಣಗಲು ಹಾಕಿದ್ದಾರೆ, ಕಟಾವು ಯಂತ್ರ ಸಿಗದ ಕೆಲವು ರೈತರು ರಾಶಿ ಮಾಡಲು ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸುರಿದ ಮಳೆಯಿಂದ ತೊಗರಿಗೆ ಹಾನಿ ಉಂಟಾಗಲಿದೆ ಎಂದು ರೈತರು ಹೇಳಿದರು.
‘ಮಳೆಯ ನಿರೀಕ್ಷೆ ಮಾಡದೆ ಕಟಾವು ಮಾಡಿ ಬಯಲು ಪ್ರದೇಶದಲ್ಲಿ ಒಣಗಲು ಹಾಕಿದ ತೊಗರಿ ಮಳೆಗೆ ತೊಯ್ದಿದೆ, ಕಟಾವು ಮಾಡದ ತೊಗರಿಯೂ ಮಳೆಯಿಂದ ನೆಲಕಚ್ಚಿದೆ’ ಎಂದು ರೈತರು ಅಳಲು ತೋಡಿಕೊಂಡರು.
‘ರಾಶಿ ಮಾಡಿದ ತೊಗರಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಮಚ್ಚಿದ್ದರೂ ಜೋರು ಮಳೆಯಿಂದ ನೀರು ಹರಿದು ತಳ ಭಾಗದಲ್ಲಿ ಅಲ್ಪ ಸ್ವಲ್ಪ ತೊಗರಿ ತೊಯ್ದಿವೆ, ಅದನ್ನು ಹಾಗೆಯೇ ಬಿಟ್ಟರೆ ಮೊಳಕೆಯೊಡೆಯುತ್ತದೆ. ಮತ್ತೆ ಒಣಗಲು ಹಾಕಬೇಕು, ಕಟಾವು ಮಾಡದ ತೊಗರಿ ಬುಡ್ಡಿ ಬಿರುಕು ಬಿಟ್ಟು ಹಾಳಾಗುತ್ತದೆ, ಒಟ್ಟಾರೆ ಅಕಾಲಿಕ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ತಿಮ್ಮಣ್ಣ ಯಾದವ ಹೇಳಿದರು.
ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಈಗಾಗಲೇ ನಷ್ಟ ಅನುಭವಿಸುವಂತಾಗಿದೆ ಈಗ ಮಳೆಯಿಂದ ಮತ್ತಷ್ಟು ಹಾನಿ ಉಂಟಾಗಿದೆಮೌನೇಶ ಹಿರೇಕುರಬರ ರೈತ
ಬಿ.ಎ.ನಂದಿಕೋಲಮಠ
ಲಿಂಗಸುಗೂರು: ತೊಗರಿ ರಾಶಿಯಲ್ಲಿ ತೊಡಗಿದ್ದ ರೈತರಿಗೆ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಚಂಡಮಾರುತದ ಗಾಳಿ ಮಳೆಗೆ ಭಾಗಶಃ ಭತ್ತ ನೆಲಕ್ಕೆ ಉರುಳಿತ್ತು. ತೊಗರಿ ಬೆಳೆ ಕಾಯಿ ತೊಯ್ದು ಮೊಳಕೆ ಒಡೆದಿದ್ದವು. ಈ ಮಧ್ಯೆ ಶೇ70ರಷ್ಟು ಭತ್ತ ಮತ್ತು ತೊಗರಿ ಬೆಳೆದಿದ್ದರಿಂದ ರಾಶಿ ಯಂತ್ರಗಳ ಕೊರತೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಯಂತ್ರ ಬಾಡಿಗೆ ಕೇಳಿದಷ್ಟು ನೀಡಿದರು ಸಿಗದೆ ಹೋಗಿರುವುದು ರೈತರನ್ನು ಪರದಾಡುವಂತೆ ಮಾಡಿದೆ. ಶೇ25ರಷ್ಟು ಬೆಳೆ ರಾಶಿ ಮಾಡುವ ಹಂತದಲ್ಲಿದೆ.
ಶನಿವಾರ ರಾತ್ರಿ ಏಕಾಏಕಿ ಮಳೆ ಸುರಿದ್ದರಿಂದ ರಾಶಿ ಮಾಡಿರುವ ಭತ್ತ ಮತ್ತು ತೊಗರಿ ಶೇ15ರಷ್ಟು ಮಳೆ ನೀರಿಗೆ ನೆನೆದು ಹಾಳಾಗಿದೆ. ತೊಗರಿ ನೀರು ಬಿದ್ದ ಸ್ಥಳದಲ್ಲಿ ಉಬ್ಬಿ ಮೊಳಕೆ ಹೊಡೆಯುವ ಸ್ಥಿತಿಗೆ ತಲುಪಿವೆ. ಭತ್ತ ನೀರಿನಲ್ಲಿ ಎದ್ದಿ ತಗೆದಂತಾಗಿದೆ. ಮಳೆ ನೀರಿಗೆ ನೆನೆದಿರುವ ಕಾಳು ಇಡಿ ರಾಶಿಯ ಬೆಲೆಗೆ ಕುತ್ತು ತರುವಂತಾಗಿದೆ ಎಂದು ರೈತರಾದ ಭದ್ರಪ್ಪ ಆನೆಹೊಸೂರು, ಬೀರಪ್ಪ ಯಲಗಲದಿನ್ನಿ ಅಳಲು ತೋಡಿಕೊಂಡಿದ್ದಾರೆ.
‘ಚಂಡಮಾರು ಮತ್ತು ವಾಯುಭಾರ ಕುಸಿತ ಪರಿಣಾಮ ಮೇಲಿಂದ ಮೇಲೆ ಬೆಳೆ ಹಾನಿಯಾಗಿ ಸಂಕಷ್ಟ ಎದುರಾಗಿದೆ. ಇನ್ನೊಂದಡೆ ಮಾರುಕಟ್ಟೆಯಲ್ಲಿ ತೊಗರಿ ಬೆಳೆ ಅಬ್ಬರದಿಂದ ಬೆಳೆದು ನಿಂತಾಗ ₹11,200ರಷ್ಟು ದರ ಇತ್ತು. ರಾಶಿ ಆರಂಭಗೊಂಡು ಮಾರುಕಟ್ಟೆಗೆ ರೈತರು ಹೋಗುತ್ತಿದ್ದಂತೆ ಸದ್ಯ ₹7,200–₹7,300 ಇದೆ’ ಎಂದು ರೈತ ಸುಭಾಷ ಗೌಡೂರು ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.