ADVERTISEMENT

ಜಿಲ್ಲೆಯ ಕೃಷಿಗೆ ಪೂರಕವಾದ ಅಡ್ಡಮಳೆ

ರಾಯಚೂರಿನಲ್ಲಿ ಭಾರಿ ಮಳೆ, ತಾಲ್ಲೂಕುಗಳಲ್ಲಿ ತುಂತುರು

​ಪ್ರಜಾವಾಣಿ ವಾರ್ತೆ
Published 18 ಮೇ 2022, 14:22 IST
Last Updated 18 ಮೇ 2022, 14:22 IST
ರಾಯಚೂರಿನಲ್ಲಿ ಬುಧವಾರ ಸುರಿದ ಮಳೆಯಿಂದ ಎನ್‌ಜಿಓ ಕಾಲೋನಿಯ ಶಾಲೆಯ ಆವರಣದಲ್ಲಿ ನೀರು ಸಂಗ್ರಹವಾಗಿರುವ ದೃಶ್ಯ.
ರಾಯಚೂರಿನಲ್ಲಿ ಬುಧವಾರ ಸುರಿದ ಮಳೆಯಿಂದ ಎನ್‌ಜಿಓ ಕಾಲೋನಿಯ ಶಾಲೆಯ ಆವರಣದಲ್ಲಿ ನೀರು ಸಂಗ್ರಹವಾಗಿರುವ ದೃಶ್ಯ.   

ರಾಯಚೂರು: ಜಿಲ್ಲೆಯ ವಿವಿಧೆಡೆ ಎರಡು ದಿನಗಳಿಂದ ಆಗಾಗ ಸುರಿಯುತ್ತಿರುವ ಅಡ್ಡಮಳೆಯು ಮುಂಗಾರು ಕೃಷಿ ಚಟುವಟಿಕೆಗೆ ಪೂರಕವಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

ರಾಯಚೂರು ನಗರ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಮಂಗಳವಾರ ಮತ್ತು ಬುಧವಾರ ಸಂಜೆ ಬಿರುಸಿನಿಂದ ಮಳೆ ಸುರಿದಿದೆ. ಚರಂಡಿಗಳಲ್ಲಿ ತುಂಬಿಕೊಂಡಿದ್ದ ಘನತ್ಯಾಜ್ಯವು ಮಳೆನೀರಿನಲ್ಲಿ ಕೊಚ್ಚಿಕೊಂಡು ಬಡಾವಣೆ ಮಾರ್ಗಗಳಲ್ಲಿ ಹರಡಿಕೊಂಡಿರುವ ದೃಶ್ಯ ರಾಯಚೂರು ನಗರದಲ್ಲಿ ಸಾಮಾನ್ಯವಾಗಿದೆ. ರಸ್ತೆ ಗುಂಡಿಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆನೀರು ಸಂಗ್ರಹವಾಗಿದೆ. ಬಹುತೇಕ ಮಳೆಗಾಲ ಆರಂಭವಾದಂತಹ ವಾತಾವರಣ ಎರಡು ದಿನಗಳಿಂದ ಕಾಣುತ್ತಿದೆ.

ಲಿಂಗಸುಗೂರು, ಸಿರವಾರ ಮತ್ತು ಮಸ್ಕಿ ತಾಲ್ಲೂಕುಗಳಲ್ಲಿಯೂ ಬುಧವಾರ ಸಂಜೆ ಮಳೆ ಸುರಿದಿದೆ. ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿದಿದ್ದು, ಮಳೆ ಬರುವ ಸಾಧ್ಯತೆ ದಟ್ಟವಾಗಿತ್ತು. ಕೆಲವು ಕಡೆ ಮಾತ್ರ ತುಂತುರು ಮಳೆಯಾಗಿದೆ. 42 ಡಿಗ್ರಿ ಸೆಲ್ಸಿಯಸ್‌ವರೆಗೂ ಏರಿಕೆಯಾಗಿದ್ದು ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆಗಾಲ ಆರಂಭಕ್ಕೂ ಮುನ್ನವೇ ತಂಪಿನ ಅನುಭವ ಆರಂಭವಾಗಿದೆ.

ADVERTISEMENT

ಭೂಮಿ ಹದ ಮಾಡಿಕೊಂಡಿರುವ ರೈತರು ಜೂನ್‌ ಎರಡನೇ ವಾರದಿಂದ ಮುಂಗಾರು ಮಳೆಗಾಗಿ ಪ್ರತಿವರ್ಷ ಕಾಯುತ್ತಾರೆ. ಇದೀಗ ಮೇ ಮಧ್ಯೆದಲ್ಲೇ ಮಳೆ ಸುರಿಯುತ್ತಿರುವುದರಿಂದ ಭೂಮಿ ಹದವಾಗುವುದಕ್ಕೆ ಅನುಕೂಲ ಹಾಗೂ ತೇವಾಂಶ ಉಳಿಯುತ್ತದೆ ಎನ್ನುವುದು ರೈತರು ನಿರೀಕ್ಷೆ.

’ಮಾರ್ಚ್‌ನಿಂದ ಮೇ 17 ರವರೆಗೂ ವಾಡಿಕೆಯಂತೆ 48 ಎಂಎಂ ಮಳೆ ಸುರಿಯಬೇಕು. ಆದರೆ, ರಾಯಚೂರು ಜಿಲ್ಲೆಯಲ್ಲಿ ಮಳೆ ಆಗಿಲ್ಲ. ಹೀಗಾಗಿ ಹಿಂಗಾರು ಕೊಯ್ಲಿಗೆ ಅನುಕೂಲವಾಗಿದ್ದು, ಜಮೀನುಗಳಲ್ಲಿದ್ದ ಬಹುತೇಕ ಭತ್ತ ಎತ್ತುವಳಿಯಾದ ಬಳಿಕವೇ ಮಳೆ ಆಗುತ್ತಿರುವುದು ಒಳ್ಳೆಯದಾಗಿದೆ. ಏಪ್ರಿಲ್‌ ಹಾಗೂ ಮೇ ಆರಂಭದಲ್ಲಿ ನೆರೆಯ ಯಾದರಿರಿ, ಕಲಬುರಗಿ ಜಿಲ್ಲೆಗಳಲ್ಲಿ ಮಳೆಯಾದರೂ ರಾಯಚೂರಿನಲ್ಲಿ ಆಗದಿರುವುದು ರೈತರಿಗೆ ಆಗ ಕೂಡಾ ಒಳ್ಳೆಯದೇ ಆಗಿತ್ತು. ರಾಯಚೂರು ಜಿಲ್ಲೆಗೆ ಈ ವರ್ಷ ಮುಂಗಾರು ಪ್ರವೇಶ ಸ್ವಲ್ಪ ತಡವಾಗುತ್ತದೆ ಎನ್ನುವ ಮುನ್ಸೂಚನೆ ಇದೆ‘ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.