ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ: ಜೀವನ ಅಸ್ತವ್ಯಸ್ತ

ದಿನ್ನಿ ಕ್ಯಾಂಪ್‌ ಸರ್ಕಾರಿ ಶಾಲಾ ಕೋಣೆಗಳಿಗೂ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 12:35 IST
Last Updated 24 ಸೆಪ್ಟೆಂಬರ್ 2019, 12:35 IST

ರಾಯಚೂರು: ಜಿಲ್ಲೆಯ ಲಿಂಗಸುಗೂರು, ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಸಾಮಾನ್ಯ ಜೀವನ ಅಸ್ತವ್ಯಸ್ತವಾಯಿತು.

ಸಿಂಧನೂರು, ಮಾನ್ವಿ, ದೇವದುರ್ಗ ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆ ಸುರಿದಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಸಾಧಾರಣ ಮಳೆ ಬಿದ್ದಿದೆ. ಆದರೆ, ರಾಯಚೂರು ತಾಲ್ಲೂಕಿನ ಕಲ್ಮಲಾ, ಯರಗೇರಾ ಹಾಗೂ ಗಿಲ್ಲೇಸುಗೂರು ಹೋಬಳಿಗಳಲ್ಲಿ ಅಲ್ಪ ಪ್ರಮಾಣದ ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 25 ಮಿ.ಮೀ. ಮಳೆ ಸುರಿದಿದೆ. ಸಿಂಧನೂರು ತಾಲ್ಲೂಕಿನ ಎಲ್ಲ ಹೋಬಳಿಗಳ ವ್ಯಾಪ್ತಿಯಲ್ಲಿ 38 ಮಿ.ಮೀ. ಅತಿಹೆಚ್ಚು ಮಳೆಯಾಗಿದ್ದು, ಬಾದರ್ಲಿ ಹೋಬಳಿಯಲ್ಲಿ 90 ಮಿ.ಮೀ., ವಲ್ಕಂದಿನ್ನಿಯಲ್ಲಿ 78 ಮಿ.ಮೀ. ಮಳೆ ಬಿದ್ದಿರುವುದು ಮಾಪನದಲ್ಲಿ ದಾಖಲಾಗಿದೆ.

ADVERTISEMENT

ರಾಯಚೂರು ತಾಲ್ಲೂಕಿನಲ್ಲಿ 8 ಮಿ.ಮೀ. ಅತಿಕಡಿಮೆ ಮಳೆಯಾಗಿದೆ. ಗಿಲ್ಲೇಸುಗೂರು, ಯರಗೇರಾ, ರಾಯಚೂರು ಮತ್ತು ದೇವಸುಗೂರು ಹೋಬಳಿಗಳಲ್ಲಿ ಅಲ್ಪ ಮಳೆ ಆಗಿದ್ದು, ಕಲ್ಮಲಾ ಹೋಬಳಿವೊಂದರಲ್ಲಿ ಮಾತ್ರ 28 ಮಿ.ಮೀ. ಮಳೆ ಬಿದ್ದಿದೆ.

ಜೂನ್‌ನಿಂದ ಸೆಪ್ಟೆಂಬರ್‌ 24 ರವರೆಗೂ ಜಿಲ್ಲೆಯಲ್ಲಿ ವಾಡಿಕೆ ಮಳೆ 417 ಮಿ.ಮೀ. ಸುರಿಯಬೇಕಿತ್ತು. ವಾಸ್ತವದಲ್ಲಿ 314.5 ಮಿ.ಮೀ. ಮಳೆಯಾಗಿದೆ. ಇನ್ನು ಶೇ 25 ರಷ್ಟು ಮಳೆ ಕೊರತೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.