
ಪ್ರಜಾವಾಣಿ ವಾರ್ತೆ
ರಾಯಚೂರು: ನಗರದ ಕೆಲವು ಭಾಗಗಳಲ್ಲಿ ಬುಧವಾರ ಸಂಜೆ ಕೆಲಕಾಲ ಗುಡುಗು, ಸಿಡಿಲು ಸಹಿತ ಮಳೆ ಸುರಿಯಿತು.
ಮಳೆ ಅಬ್ಬರದಿಂದ ಸುರಿಯುತ್ತಿರುವುದನ್ನು ನೋಡಿ ಜನರು ಖುಷಿಯಾಗಿದ್ದರು. ರಾಯಚೂರು ನಗರ ಕೇಂದ್ರೀತವಾಗಿ 15 ನಿಮಿಷ ಮಾತ್ರ ಮಳೆ ಸುರಿಯಿತು. ಇದರಿಂದ ಹೊರಗಿನ ವಾತಾವರಣದಲ್ಲಿ ತಂಪು ಹರಡಿಕೊಂಡಿದ್ದರೂ ಕಟ್ಟಡಗಳಲ್ಲಿ ಬಿಸಿ ವಾತಾವರಣವಿತ್ತು.
ಏಪ್ರಿಲ್ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಮಳೆಯ ನೀರೆಲ್ಲವನ್ನು ಭೂಮಿಯು ಆಪೋಶನ ಪಡೆಯಿತು. ಮಳೆ ಬಿದ್ದ 15 ನಿಮಿಷಗಳ ಬಳಿಕ ಮಳೆ ಆಗಿರುವ ಕುರುಹುಗಳೆಲ್ಲ ನಾಪತ್ತೆಯಾದವು. ರಸ್ತೆಗಳಲ್ಲಿ ಬಿದ್ದುಕೊಂಡಿದ್ದ ತ್ಯಾಜ್ಯವೆಲ್ಲ ಚರಂಡಿಗಳಿಗೆ ನುಗ್ಗಿತು. ಬಿಸಿಲಿನಿಂದ ಕಾದಿದ್ದ ಭೂಮಿಗೆ ಮಳೆ ನೀರಿನ ಸಿಂಚನವಾಗಿದ್ದರಿಂದ ಮಣ್ಣಿನ ವಾಸನೆ ಹರಡಿ ಹಿತಾನುಭವ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.