ಸಿಂಧನೂರು: ಸಿಂಧನೂರು ದಸರಾ ಉತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ವಿವಿಧ ಜನಪದ ಕಲಾಮೇಳಗಳು ಜನಮನ ರಂಜಿಸಿದವು.
ಇಲ್ಲಿನ ಮಿನಿವಿಧಾನಸೌಧ ಕಾರ್ಯಾಲಯದ ಮುಂಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದು ಉತ್ಸವ ಸಮಿತಿಯ ಮುಖಂಡರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬರುವಿಕೆಗಾಗಿ ಕಾದು ಕುಳಿತಿದ್ದರು.
ಹೆಲಿಕ್ಯಾಪ್ಟರ್‌ನಲ್ಲಿ ಬಂದ ಡಿ.ಕೆ.ಶಿವಕುಮಾರ್ ಅವರು ಸರ್ಕಾರಿ ಪದವಿ ಕಾಲೇಜು ಬಳಿ ಇರುವ ಹೆಲಿಪ್ಯಾಡ್‍ನಲ್ಲಿ ಇಳಿದು ನೇರವಾಗಿ ಗಾಂಧಿ ವೃತ್ತಕ್ಕೆ ಬಂದು ಜೋಡೆತ್ತುಗಳ ಪ್ರತಿಮೆಗೆ ಹೂಮಾಲೆ ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಬಸ್ ನಿಲ್ದಾಣ ರಸ್ತೆ, ಬಸವ ವೃತ್ತ, ಬಾಬುಜಗಜೀವನರಾಂ ವೃತ್ತದ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯಲ್ಲಿ ನಿರ್ಮಿಸಿದ್ದ ವೇದಿಕೆಗೆ ಶಿವಕುಮಾರ್ ಮತ್ತು ಇತರ ಮುಖಂಡರನ್ನು ತೆರೆದ ವಾಹನದಲ್ಲಿ ಕರೆ ತರಲಾಯಿತು.
ಮೆರವಣಿಗೆಯಲ್ಲಿ ಅಲಂಕೃತಗೊಂಡ ಜೋಡೆತ್ತು, ರೌಡಕುಂದಾ ತಂಡದವರ ಪಾಂಡವರ ವೇಷಭೂಷಣ, ಚಿನ್ನಪ್ಪ ತಂಡದವರ ಹಗಲುವೇಷ, ನಿವೃತ್ತ ಶಿಕ್ಷಕ ಬೀರಪ್ಪ ಶಂಭೋಜಿ ನೇತೃತ್ವದ ಸ್ಫೂರ್ತಿ ಯುವತಿ ಮಂಡಳಿ ಹಾಗೂ ಆಕ್ಸಫರ್ಡ್ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ, ಗೀತಾ ರಾಠೋಡ್ ತಂಡದ ಬಂಜಾರ ನೃತ್ಯ, ಹುಡಾ ತಂಡದವರ ಕೋಲಾಟ ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದವು. ಆಕ್ಸಫರ್ಡ್ ಮತ್ತು ವಿಜಡಮ್ ಕಾಲೇಜಿನ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೈತ ವೇಷ ಹಾಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ತೆರೆದ ವಾಹನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್ ಸಚೇತಕ ಸಲೀಂ ಅಮ್ಮದ್, ಶಾಸಕರಾದ ಹಂಪನಗೌಡ ಬಾದರ್ಲಿ, ತುರ್ವಿಹಾಳ ಬಸನಗೌಡ, ಬಸನಗೌಡ ದದ್ದಲ್, ಎನ್.ಎಂ.ನಾಗರಾಜ, ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರಾದ ಶರಣೇಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ ಕಲಾಮೇಳಗಳ ವೈಭವ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಪಿಎಂಸಿ ಟೆಂಡರ್ ಹಾಲ್‍ನಲ್ಲಿ ನಿರ್ಮಿಸಿದ್ದ ವೇದಿಕೆಯ ಮೇಲೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನಪದ ಕಲಾವಿದರ ಜೋಗತಿ ನೃತ್ಯ ಪ್ರೇಕ್ಷಕರನ್ನು ರಂಜಿಸಿತು. ವೇದಿಕೆಯ ಮುಂಭಾಗದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸಿರಿಧಾನ್ಯಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.