ಮಂತ್ರಾಲಯ (ರಾಯಚೂರು): ಗುರುಸಾರ್ವಭೌಮ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಭಾನುವಾರ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಗಳ ನೇತೃತ್ವದಲ್ಲಿ ರಾಯರ ಪೂರ್ವ ಆರಾಧನೆ ಹಾಗೂ ರಜತ ಸಿಂಹವಾಹನೋತ್ಸವ ಅದ್ಧೂರಿಯಾಗಿ ಜರುಗಿತು.
ಸುಬುಧೇಂದ್ರ ತೀರ್ಥರು ರಾಘವೇಂದ್ರ ಸ್ವಾಮಿಗಳ ಬೃಂದಾವನ, ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಪೂಜೆ ನೆರವೇರಿಸಿ ಮಹಾಮಂಗಳಾರತಿ ಬೆಳಗಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ, ಪಂಡಿತರಿಂದ ಪ್ರವಚನ ಹಾಗೂ ಭಜನೆ ನಡೆಯಿತು.
ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ‘ಭಾರತದ ಎಂಟು ಸ್ವಯಂ ವ್ಯಕ್ತ ಕ್ಷೇತ್ರಗಳಲ್ಲಿ
ಮೊದಲನೆಯ ಕ್ಷೇತ್ರವಾದ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನದಿಂದ ಆಗಮಿಸಿರುವ ಶೇಷವಸ್ತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡು ಶ್ರೀರಾಘವೇಂದ್ರ ಸ್ವಾಮಿಗಳಿಗೆ
ಸಮರ್ಪಿಸಲಾಗಿದೆ‘ ಎಂದು ತಿಳಿಸಿದರು.
‘ತಮಿಳುನಾಡು ಸರ್ಕಾರ ರಾಯರಿಗೆ ಪ್ರತಿವರ್ಷ ಶೇಷವಸ್ತ್ರ ಕೊಡುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ರಾಯರ ಆರಾಧನಾ ಸಮಯದಲ್ಲಿ ಟಿಟಿಡಿ, ಶ್ರೀರಂಗ, ಅವೋಬಿಳಂ ಹಾಗೂ ಕಾಂಚಿ ಕ್ಷೇತ್ರಗಳಿಂದ ಶ್ರೀಮಠಕ್ಕೆ ಬರುವ ವಸ್ತ್ರಪ್ರಸಾದವನ್ನು ಗುರುರಾಯರಿಗೆ ಸಮರ್ಪಿಸುವ ಸಂಪ್ರದಾಯ ಹಾಕಿಕೊಳ್ಳಲಾಗಿದೆ‘ ಎಂದು ಹೇಳಿದರು.
‘ಧಾರ್ಮಿಕ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿರುವ ಭಕ್ತರಿಗೆ ಗುರುಗಳ ಹಾಗೂ ಭಗವಂತನ ಅನುಗ್ರಹ ದೊರೆಯಲಿ’ ಎಂದು ಪ್ರಾರ್ಥಿಸಿದರು.
ಬೆಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಹೈದರಾಬಾದ್, ಕರ್ನೂಲ್, ಅನಂತಪುರ, ಶ್ರೀರಂಗಂ ಹಾಗೂ ಮುಂಬೈನಿಂದ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದಾರೆ. ಮಧ್ವ ಮಾರ್ಗವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಮಂತ್ರಾಲಯದಲ್ಲಿ ಆಧ್ಮಾತ್ಮಿಕ ವಾತಾವರಣ ಸೃಷ್ಟಿಯಾಗಿದ್ದು, ಭಕ್ತರು ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಧ್ಯಾರಾಧನೆ
ಆ.11ರಂದು ಮಧ್ಯಾರಾಧನೆ ಮಹಾ ಪಂಚಾಮೃತ ಅಭಿಷೇಕ ಗಜವಾಹನೋತ್ಸವ ಹಾಗೂ ಸ್ವರ್ಣ ರಥೋತ್ಸವ ನಡೆಯಲಿದೆ.
ಆ.12 ರಂದು ಉತ್ತರ ಆರಾಧನೆ ಬೆಳಿಗ್ಗೆ 8 ಗಂಟೆಗೆ ವಸಂತೋತ್ಸವ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಜ್ರಕವಚ ಸಮರ್ಪಣೆ 10 ಗಂಟೆಗೆ ಮಹಾರಥೋತ್ಸವ ಜರುಗಲಿದೆ.
ಆ.13ರಂದು ಅಶ್ವ ವಾಹನೋತ್ಸವ ಹಾಗೂ ಶ್ರೀಸುಗಣೇಂದ್ರ ತೀರ್ಥರ ಆರಾಧಾನೆ
ಆ.14ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ವಿದ್ವಾನ ನರಾಚಾರಿಆಚಾರ ವಾಲ್ವೆಕರ್ ಅವರಿಂದ ಪ್ರವಚನ ಹಾಗೂ ರಾತ್ರಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.