ರಾಯಚೂರು: ನಗರದ ಹೊರವಲಯ ಪೋತ್ಗಲ್ ಸಮೀಪ ಸಕಲ ಸರ್ಕಾರಿ ಗೌರವದೊಂದಿಗೆ ಹಾಗೂ ಅಂತರ ಕಾಪಾಡಿಕೊಂಡು ಮಾರ್ಗಸೂಚಿ ಅನುಸಾರ ಕೋವಿಡ್‌ನಿಂದ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತದಿಂದ ಶುಕ್ರವಾರ ನೆರವೇರಿಸಲಾಯಿತು.
ಪಿಪಿಇ ಕಿಟ್ ಧರಿಸಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಆ್ಯಂಬುಲೆನ್ಸ್‌ನಿಂದ ಪಾರ್ಥಿವ ಶರೀರವನ್ನು ಹೊರತಂದು ಕೆಲಕಾಲ ಕೆಳಗೆ ಇರಿಸಿದ್ದರು. ಅಶೋಕ ಗಸ್ತಿ ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರ ಆಕ್ರಂದನ ಮನ ಕಲಕುವಂತಿತ್ತು. ಕುಟುಂಬ ಸದಸ್ಯರು ನಿಗದಿತ ದೂರದಿಂದಲೇ ದರ್ಶನ ಮಾಡಲು ಅವಕಾಶ ಕಲ್ಪಿಸಲಾಯಿತು.
ಪಿಪಿಇ ಕಿಟ್ ಧರಿಸಿದ್ದ ಅಶೋಕ ಗಸ್ತಿ ಅವರ ಪುತ್ರಿಯರಿಗೆ ಪಾರ್ಥಿವ ಶರೀರದ ಹತ್ತಿರ ಹೋಗಲು ಅವಕಾಶ ನೀಡಲಾಗಿತ್ತು. ಪೊಲೀಸರು ಕುಶಾಲತೋಪು ಹಾರಿಸಿದ ಬಳಿಕ, ಪೊಲೀಸ್ ವಾದ್ಯ ತಂಡವು ರಾಷ್ಟ್ರಗೀತೆಯನ್ನು ನುಡಿಸಿತು. ಆನಂತರ ಹಿರಿಯ ಪುತ್ರಿ ನೇಹಾ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನಿಗದಿತ ದೂರದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.