ADVERTISEMENT

ಭಾವೈಕ್ಯದ ಗಾಯನಕ್ಕೆ ಒಲಿದ ಪ್ರಶಸ್ತಿ

ನಾಗರಾಜ ಚಿನಗುಂಡಿ
Published 28 ಅಕ್ಟೋಬರ್ 2019, 19:45 IST
Last Updated 28 ಅಕ್ಟೋಬರ್ 2019, 19:45 IST
ಉಸ್ಮಾನಸಾಬ್‌ ಖಾದರಸಾಬ್‌
ಉಸ್ಮಾನಸಾಬ್‌ ಖಾದರಸಾಬ್‌   

ರಾಯಚೂರು: ಜಿಲ್ಲೆ ಸಿಂಧನೂರು ತಾಲ್ಲೂಕು ಅಲಬನೂರ ಗ್ರಾಮದ ಉಸ್ಮಾನಸಾಬ್‌ ಖಾದರಸಾಬ್‌ 30 ವರ್ಷಗಳಿಂದ ಭಾವೈಕ್ಯದ ಹಾಡುಗಳೊಂದಿಗೆ ಗುರುತಿಸಿಕೊಂಡ ಜಾನಪದ ಕಲಾವಿದರಾಗಿದ್ದು, ಈ ಸಲ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಂಗಭೂಮಿ ಕಲಾವಿದರಾಗಿದ್ದ ತಂದೆಯಿಂದ ಪ್ರಭಾವಿತರಾಗಿ ಚಿಕ್ಕಂದಿನಲ್ಲೆ ತತ್ವಪದ ಗಾಯನ ಆರಂಭಿಸಿದ್ದಾರೆ. ಮಠಮಾನ್ಯಗಳಲ್ಲಿ ಅಧ್ಯಯನ ಮಾಡಿರುವುದರಿಂದ ಆಧ್ಯಾತ್ಮದ ಸೆಳೆತಕ್ಕೊಳಗಾಗಿದ್ದಾರೆ. ಜಾನಪದ ಗಾಯನದಲ್ಲಿಯೆ ಬದುಕು ಕಟ್ಟಿಕೊಂಡಿದ್ದಾರೆ. ವಚನ ಸಾಹಿತ್ಯ, ದಾಸಸಾಹಿತ್ಯ, ತತ್ವಪದಗಳು ಸೇರಿದಂತೆ ಮಾನವೀಯ ನೆಲೆ, ಜೀವಪರವಾಗಿ ಮೂಡಿ ಬಂದಿರುವ ಎಲ್ಲ ರೀತಿ ಸಾಹಿತ್ಯಕ್ಕೆ ತಮ್ಮ ಕಂಠವನ್ನು ಬಳಸಿ ಅದನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕದಲ್ಲಿ ಉಸ್ಮಾನಖಾನ್‌ ತೊಡಗಿಸಿಕೊಂಡಿದ್ದಾರೆ.

ಇವರೊಂದಿಗೆ ತಬಲಾ, ಕ್ಯಾಸಿಯೋ ಸಾಥಿಗಳು ಇದ್ದಾರೆ. ತಂಡ ಕಟ್ಟಿಕೊಂಡು ಊರಿಂದ ಊರಿಗೆ ಹೋಗಿ ಗಾಯನ ಮಾಡುವುದು ನಿತ್ಯ ಬದುಕು. ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ಸಂತಸಗೊಂಡಿದ್ದಾರೆ.

ADVERTISEMENT

‘ಅತಿವೃಷ್ಟಿಯಿಂದ, ಪ್ರವಾಹದೊಳಗೆ ಏನೂ ತಪ್ಪು ಮಾಡದೆ ಸಿಲುಕಿ ಆತ್ಮಾರ್ಪಣೆ ಮಾಡಿಕೊಂಡಿರುವ ಎಲ್ಲ ಜೀವಗಳಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಪ್ರವಾಹದ ದೃಶ್ಯಗಳನ್ನು ನೋಡಿ ಮರಗುತ್ತಿದ್ದ ನನ್ನ ಅಂತರಾತ್ಮಕ್ಕೆ ಶಾಂತಿ ಕರುಣಿಸಲು ದೇವರು ಈ ಪ್ರಶಸ್ತಿ ದೊರಕಿಸಿದ್ದಾನೆ. ಉತ್ತರ ಕರ್ನಾಟಕದವರನ್ನು ಗುರುತಿಸಿದ್ದಕ್ಕೆ ಸಂತೋಷವಾಗಿದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಅಲಬನೂರಿನಲ್ಲಿ ಈಚೆಗೆ ಮಸೀದಿ ಬಳಿ ‘ಭಾವೈಕ್ಯ ಕಾರ್ಯಕ್ರಮ’ ಆಯೋಜಿಸಿದ್ದು ತುಂಬಾ ವಿಶೇಷವಾಗಿತ್ತು. ಎಲ್ಲ ಧರ್ಮಗಳ ಜನರು ಸೇರಿದ್ದರು. ಬಸವಣ್ಣನ ವಚನಗಳು, ಪುರಂದಾಸರ ಪದಗಳನ್ನು ಹಾಡಿದೆ. ‘ಬೇಗಂ ಫಾತಿಮಾ ಬೇರೆ ಅಲ್ಲ, ಪಾರ್ವತಿ ಬೇರೆ ಅಲ್ಲ’ ಎಂದು ಹಾಡಿದ್ದನ್ನು ಎಲ್ಲ ಧರ್ಮೀಯರು ಮೆಚ್ಚಿಕೊಂಡಿದ್ದು ಸದಾ ಸ್ಮರಣೀಯ ಘಳಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.