ADVERTISEMENT

ಬಳಗಾನೂರು; ಬಂಧುಶತಪುರೇಶ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:31 IST
Last Updated 17 ಮೇ 2022, 4:31 IST
ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಸೋಮವಾರ ಬಂಧುಪುರೇಶ‌ನ ನೂತನ ರಥೋತ್ಸವ ಅದ್ದೂರಿಯಾಗಿ ಜರುಗಿತು
ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಸೋಮವಾರ ಬಂಧುಪುರೇಶ‌ನ ನೂತನ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಮಸ್ಕಿ: ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಬಂಧುಶತಪುರೇಶನ ನೂತನ ರಥೋತ್ಸವವು ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಬೆಳಿಗ್ಗೆ ಮಾರುತಿ ದೇವಸ್ಥಾನದಲ್ಲಿ ಬಂಧುಪುರೇಶನ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಗಳು ನಡೆದವು. ನೂತನ ರಥಕ್ಕೆ ಹೋಮ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು.

ನೂತನ ರಥದ ಕಳಸದ ಮೆರವಣಿಗೆ ಹಾಗೂ ರಥದ ಕಳಸಾರೋಹಣ ನಡೆಯಿತು. ಚಂಡಿ ವಾದನ, ಡೊಳ್ಳು ಕುಣಿತ, ಭಜನೆ ಸೇರಿದಂತೆ ಅನೇಕ ಕಲಾ ತಂಡಗಳು ಪಾಲ್ಗೊಂಡಿದ್ದವು. ನೂರಾರು ಮಹಿಳೆಯರು ಕಳಸ ಹಾಗೂ ಪೂರ್ಣಕುಂಭದೊಂದಿಗೆ ಭಾಗವಹಿಸಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ADVERTISEMENT

ಸಂಜೆ ದೇವಸ್ಥಾನದ ನೂತನ ರಥವನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ರಥಕ್ಕೆ ವಿವಿಧ ಧಾರ್ಮಿಕ ಪೂಜೆಗಳನ್ನು ಸಲ್ಲಿಸಲಾಯಿತು. ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತರಲಾಗಿದ್ದ ಬಂಧುಪುರೇಶನ ಉತ್ಸವ ಮೂರ್ತಿಯನ್ನು ನೂತನ ರಥದ ಮೇಲೆ ಪ್ರತಿಷ್ಠಾಪಿಸುತ್ತಿದ್ದಂತೆ ನೆರೆದ ಭಕ್ತರ ಜಯಘೋಷಗಳು ಹಾಕಿದರು.
ಶಾಸಕ ಆರ್. ಬಸನಗೌಡ, ತಹಶೀಲ್ದಾರ್ ಆರ್. ಕವಿತಾ, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಾಯಚೂರು ಜಿಲ್ಲೆ ಸೇರಿದಂತೆ ನೆರೆಯ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಾಗೂ ಕುಡಿಯುವ ನೀರು ಸೇರಿದಂತೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿ, ಪಟ್ಟಣ ಪಂಚಾಯಿತಿ ಹಾಗೂ ಮುಖಂಡರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.