ADVERTISEMENT

ವೈಭವದಿಂದ ಜರುಗಿದ ರಾಯರ ಮಧ್ಯಾರಾಧನೆ

ಉತ್ತರಾರಾಧನೆ ನಿಮಿತ್ತ ಮಠದ ಹೊರಾಂಗಣದಲ್ಲಿ ಮಹಾರಾಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 12:29 IST
Last Updated 17 ಆಗಸ್ಟ್ 2019, 12:29 IST
ಮಂತ್ರಾಲಯದಲ್ಲಿ ರಾಯರ ಮಧ್ಯಾರಾದನೆ ದಿನ ಮಠದ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ಆರಂಭಿಸುವ ಪೂರ್ವ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜಾ ವಿಧಿವಿಧಾನ ನೆರವೇರಿಸಿದರುಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌
ಮಂತ್ರಾಲಯದಲ್ಲಿ ರಾಯರ ಮಧ್ಯಾರಾದನೆ ದಿನ ಮಠದ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ಆರಂಭಿಸುವ ಪೂರ್ವ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜಾ ವಿಧಿವಿಧಾನ ನೆರವೇರಿಸಿದರುಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌   

ಮಂತ್ರಾಲಯ:ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ಮುಂದುವರಿದಿದ್ದು, ಶನಿವಾರ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರ ಭಕ್ತಿಭಾವ ನಡುವೆ ರಾಯರ ಮಧ್ಯಾರಾಧನೆ ನಡೆಯಿತು.

ದೇಶದ ವಿವಿಧೆಡೆಯಿಂದ ಸೇರಿದ್ದ ನೂರಾರು ಭಕ್ತರು ರಾಯರ ಮೂಲ ಬೃಂದಾವನದ ದರ್ಶನ ಪಡೆದು ಪುನೀತರಾದರು. ಮಠದೊಳಗಿನ ಪ್ರಾಕಾರದಲ್ಲಿ ಕುಳಿತಿದ್ದ ಅಪಾರ ಸಂಖ್ಯೆಯ ಭಕ್ತ ಸಮೂಹ ಮೂಲ ಬೃಂದಾವನದ ಮಹಾ ಅಭಿಷೇಕ ಮತ್ತು ಮೂಲ ರಾಮದೇವರ ಪೂಜೆಯನ್ನು ಎಲ್‌ಸಿಡಿ ಪರದೆ ಮೂಲಕ ವೀಕ್ಷಿಸಿದರು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನಸುಕಿನ ಜಾವದಿಂದ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳನುಸಾರ ವಿಶೇಷ ಪೂಜೆಗಳನ್ನು ನೆರವೇರಿಸಿದರು.

ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ದ ಅಧಕಾರಿಗಳು ರಾಯರಿಗೆ ಸಮರ್ಪಿಸಲು ತಂದಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ವಿಶೇಷ ವಾದ್ಯ ಮೇಳ, ಮೆರವಣಿಗೆ ಮೂಲಕ ಮಂತ್ರಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಶೇಷವಸ್ತ್ರವನ್ನು ಪಡೆದ ಶ್ರೀ ಸುಬುಧೇಂದ್ರ ತೀರ್ಥರು, ಅದನ್ನು ತಲೆಮೇಲೆ ಹೊತ್ತು ರಾಯರ ಸನ್ನಿಧಿಗೆ ತೆಗೆದುಕೊಂಡು ಹೋದರು.

ADVERTISEMENT

ಆನಂತರ ಪಂಚಾಭಿಷೇಕ, ಆರುತಿ, ಶೇಷವಸ್ತ್ರ ಸಮರ್ಪಣೆ ಬಳಿಕ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹವು ರಾಯರಿಗೆ ಜಯಘೋಷ ಕೂಗಿದರು. ಕೈಮುಗಿದು ನಮಿಸಿ, ಧನ್ಯರಾದರು. ಮಧ್ಯಾಹ್ನದ ನಂತರರಜತ, ಸ್ವರ್ಣ, ನವರತ್ನ ರಥೋತ್ಸವಗಳು ನೆರವೇರಿದವು. ಈ ರಥೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಕ್ತರು ಪ್ರಾಕಾರದಲ್ಲಿ ಬೆಳಿಗ್ಗೆಯಿಂದಲೆ ಕಾದು ಕುಳಿತಿದ್ದರು. ಚಂಡಿ ಮದ್ದಳೆ ವಾದ್ಯ ನಾದದೊಂದಿಗೆ ನಡೆದ ರಥೋತ್ಸವವು ವಿಶೇಷವಾಗಿತ್ತು.

ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲರೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಧ್ಯಾರಾಧನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ರಿಂದಲೇ ಅನ್ನಪ್ರಸಾದ ವಿತರಣೆ ನಡೆಯಿತು. ಜನರು ಸರದಿಯಲ್ಲಿ ಹೋಗಿ ಅನ್ನಪ್ರಸಾದ ಸೇವಿಸಿದರು.

ತುಂಗಾಸ್ನಾನದಿಂದ ಪುಳಕೀತ :

ತುಂಗಭದ್ರಾ ನದಿಯು ಈ ಸಲ ತುಂಬಿ ಹರಿಯುತ್ತಿದ್ದರಿಂದ ಮಂತ್ರಾಲಯಕ್ಕೆ ಬಂದಿದ್ದ ಭಕ್ತರ ಮುಖದಲ್ಲಿ ಖುಷಿಯ ಅಲೆ ಮೂಡಿತ್ತು. ಪುಣ್ಯಸ್ನಾನದಿಂದ ಧನ್ಯತೆ ಅನುಭವಿಸಿದ ಭಕ್ತರು ಆನಂತರ ಗ್ರಾಮ ದೇವತೆ ಮಂಚಾಲಮ್ಮನಿಗೆ ನಿಮಿಸಿ, ಆನಂತರ ರಾಯರ ದರ್ಶನಕ್ಕಾಗಿ ಹೋಗುತ್ತಿರುವುದು ಕಂಡುಬಂತು.

ಸದ್ಯ ತುಂಗಭದ್ರಾ ನದಿ ಪ್ರವಾಹವು ಸಾಮಾನ್ಯ ಮಟ್ಟದಲ್ಲಿದೆ. ಶುಕ್ರವಾರ 75 ಸಾವಿರ ಕ್ಯೂಸೆಕ್‌ನಷ್ಟಿದ್ದ ಪ್ರವಾಹವು ಶನಿವಾರ 50 ಸಾವಿರ ಕ್ಯುಸೆಕ್‌ಗೆ ಇಳಿಕೆಯಾಗಿದೆ. ಹರಿಯುವ ನದಿಯಲ್ಲಿ ‍ಪುಣ್ಯಸ್ನಾನ ಮಾಡುವ ಅವಕಾಶ ಸಿಕ್ಕಿರುವುದಕ್ಕಾಗಿ ಭಕ್ತರು ಪುಳಕೀತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.