ADVERTISEMENT

’ಕೇಂದ್ರದ ಯೋಜನೆ ಗ್ರಾಮೀಣರಿಗೆ ತಲುಪಿಸೋಣ‘

ಶಿಮ್ಲಾದಿಂದ ವಿವಿಧ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ

​ಪ್ರಜಾವಾಣಿ ವಾರ್ತೆ
Published 31 ಮೇ 2022, 13:31 IST
Last Updated 31 ಮೇ 2022, 13:31 IST
ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಧಾನಿಯೊಂದಿಗೆ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಫಲಾನುಭವಿಗಳು ಭಾಗವಹಿಸಿದ್ದರು.
ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಧಾನಿಯೊಂದಿಗೆ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಫಲಾನುಭವಿಗಳು ಭಾಗವಹಿಸಿದ್ದರು.   

ರಾಯಚೂರು: ಜಿಲ್ಲೆಯಲ್ಲಿ ಕೇಂದ್ರದ ನರೇಗಾ ಸೇರಿದಂತೆ ಹತ್ತಾರು ಯೋಜನೆಗಳು ಅನುಷ್ಠಾನಗೊಂಡಿದ್ದು, ಅವುಗಳನ್ನು ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಧಾನಿಯೊಂದಿಗೆ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದದ ನೇರ ಪ್ರಸಾರದ ಬಳಿಕ ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎನ್ನುವ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸಹಯೋಗದೊಂದಿಗೆ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸುತ್ತಿವೆ.. ಈ ಯೋಜನೆಯಡಿ ಎಲ್ಲ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಈ ವಿಡಿಯೋ ಸಂವಾದಲ್ಲಿ ದೇಶದ ವಿವಿಧ ರಾಜ್ಯಗಳ ಫಲಾನುಭವಿಗಳಾದ ಲಡಖ್-ತಶಿ ಲೆಹ, ಬಿಹಾರ್ ಲಲಿತಾ ದೇವಿ, ವೆಸ್ಟ್ ತ್ರಿಪುರ- ಪಂಕಜ ಸಹನಿ, ಕರ್ನಾಟಕದ ಕಲಬುರಗಿ-ಸಂತೋಷಿ ಅವರೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಉಜ್ವಲ ಯೋಜನೆ, ಪೋಷಣ್ ಅಭಿಯಾನ್, ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ ಮಿಷನ್, ವನ್ ನೇಷನ್ ವನ್ ರೇಷನ್ ಯೋಜನೆ, ಪ್ರದಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಕಾರ್ಡ್, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳ ಕುರಿತು ಪ್ರಧಾನಿ ಸಂವಾದ ನಡೆಸಿದರು.

ವಿಡಿಯೋ ಸಂವಾದದಲ್ಲಿ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಬಡವರ ಕಲ್ಯಾಣಕ್ಕಾಗಿಯೇ ನಾವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯೋಜನೆಗಳಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಅನುದಾನ ಸೋರಿಕೆಯನ್ನು ತಡೆಗಟ್ಟಿದ್ದೇವೆ. ಎಂಟು ವರ್ಷಗಳ ನಮ್ಮ ಆಡಳಿತದಲ್ಲಿ ನಾನು ಪ್ರಧಾನ ಸೇವಕನಾಗಿ ಕಾರ್ಯ ನಿರ್ವಹಿಸಿದ್ದೇನೆ, ದೇಶದ 130ಕೋಟಿ ಜನರ ಪರಿವಾರದ ಸದಸ್ಯನಾಗಿದ್ದೇನೆ‘ ಎಂದರು.

ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ ಜಹಾರ್ ಖಾನಂ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಮುಡೋಳಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಮಕೃಷ್ಣ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್., ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಬಳಗಾನೂರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ ಮೋನಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟಪ್ಪ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವಿ.ನಾಯಕ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.