ರಾಯಚೂರು: ಗುಡ್ಡಗಳಿಂದಲೇ ಸುತ್ತುವರಿದಿರುವ ನಗರದಲ್ಲಿ ಕಳೆದ 14 ವರ್ಷಗಳಲ್ಲೇ ಮೊದಲ ಬಾರಿಗೆ ದಾಖಲೆ ಮಳೆಯಾಗಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಮಳೆಯ ಪ್ರಮಾಣ 116.8 ಮಿ.ಮೀ ದಾಖಲಾಗಿದೆ.
ಭಾನುವಾರ ರಾತ್ರಿ ಅಬ್ಬರಿಸಿದ ಮಳೆ 2019ರ ಸೆಪ್ಟೆಂಬರ್ 25ರಂದು ಆಗಿದ್ದ ದಾಖಲೆಯನ್ನು ಮುರಿದಿದೆ. 2022ರ ಜೂನ್ 2ರಂದು 88 ಮಿ.ಮೀ ಹಾಗೂ 2014ರ ಆಗಸ್ಟ್ 25ರಂದು 114.6 ಮಿ.ಮೀ ಮಳೆಯಾಗಿತ್ತು. ನಂತರ ಕಳೆದ ವರ್ಷದ ವರೆಗೂ ಶತಕ ದಾಟಿರಲಿಲ್ಲ.
ಕಳೆದ 24 ಗಂಟೆಗಳ ಅವಧಿಯಲ್ಲಿ ರಾಯಚೂರು ತಾಲ್ಲೂಕಿನ ಯರಗೇರಾ ಅತಿಥಿಗೃಹದ ಆವರಣದಲ್ಲಿ 59 ಮಿ.ಮೀ, ಕಲ್ಮಲಾದಲ್ಲಿ 51ಮಿ.ಮೀ, ಮಾನ್ವಿಯಲ್ಲಿ 21.5 ಮಿ.ಮೀ, ಜೇಗರಕಲ್‌ನಲ್ಲಿ 15 ಮಿ.ಮೀ, ಚಂದ್ರಬಂಡಾದಲ್ಲಿ 11.4 ಮಿ.ಮೀ, ಕಲ್ಲೂರಲ್ಲಿ 22 ಮಿ.ಮೀ, ಮಾನ್ವಿ ತಾಲ್ಲೂಕಿನ ಕುರ್ಡಿಯಲ್ಲಿ 41 ಮಿ.ಮೀ ಹಾಗೂ ಸಿಂಧನೂರು ತಾಲ್ಲೂಕಿನ ಗೊರೆಬಾಳದಲ್ಲಿ 21.1 ಮಿ.ಮೀ ಮಳೆಯಾಗಿದೆ.
2014 ಹಾಗೂ 2019ರಲ್ಲಿ ದಾಖಲೆ ಮಳೆ ಸುರಿದಿತ್ತು. ಅದರ ನಂತರ ಮೊದಲ ಬಾರಿಗೆ ನಗರದಲ್ಲಿ 116.8 ಮಿ.ಮೀ ಮಳೆಯಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಹವಾಮಾನ ಘಟಕದ ತಾಂತ್ರಿಕ ಸಿಬ್ಬಂದಿ ತಿಳಿಸಿದರು.
ಭಾನುವಾರ ಸಂಜೆ 7.30ಕ್ಕೆ ರಭಸದಿಂದಲೇ ಆರಂಭವಾಗಿದ್ದ ಮಳೆ ರಾತ್ರಿ 9 ಗಂಟೆ ವರೆಗೂ ಅಬ್ಬರಿಸಿತ್ತು. ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದಲ್ಲಿ ನೀರು ರೈಲು ನಿಲ್ದಾಣ ರಸ್ತೆ, ಅತಿಥಿಗೃಹದ ಮುಂಭಾಗದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡು ವಾಹನ ಸವಾರರು ಮುಂದೆ ಸಾಗಲು ಪ್ರಯಾಸ ಪಡಬೇಕಾಯಿತು.
ಕಾರು ಚಾಲಕರೊಬ್ಬರು ಸಾಹಸ ಮಾಡಿ ನಿಂತ ನೀರಿನಲ್ಲಿ ವಾಹನ ಚಲಾಯಿಸಲು ಪ್ರಯತ್ನಿಸಿ ಸಿಕ್ಕಿ ಹಾಕಿಕೊಂಡರು. ಇದರಿಂದ ಟೋಯ್ ವಾಹನ ತರಿಸಿ ಕಾರು ಹೊರಗೆ ತೆಯಬೇಕಾಯಿತು. ಮಾಹಿತಿ ತಿಳಿದ ತಕ್ಷಣ ಮಹಾನಗರಪಾಲಿಕೆಯ ಆಯುಕ್ತ ಜುಹಿನ್ ಮೊಹಾಪಾತ್ರ ಅವರು ನೀರು ಹೊರಗೆ ತೆಗೆಯಲು ಸಕ್ಕಿಂಗ್ ಯಂತ್ರದ ವಾಹನ ವ್ಯವಸ್ಥೆ ಮಾಡಿದರು.
ಮಹಾನಗರಪಾಲಿಕೆಯ ಸಕ್ಕಿಂಗ್ ಯಂತ್ರದ ವಾಹನ ಎಂಟು ಬಾರಿ ರಸ್ತೆ ಮಧ್ಯೆ ನಿಲುಗಡೆಯಾಗಿದ್ದ ನೀರು ಹೀರಿಕೊಂಡು ಬೇರೆ ಕಡೆಗೆ ಸಾಗಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಬೆಳಿಗ್ಗೆಯಿಂದ ನೀರು ಹೊರಗೆ ತೆಗೆಯುವ ಕೆಲಸ ನಡೆದಿದೆ. ಮಧ್ಯಾಹ್ನ ವರೆಗೆ ಎಂಟು ಟ್ಯಾಂಕ್ ನೀರು ತೆಗೆದು ಖಾಲಿ ಮಾಡಲಾಗಿದೆ ಎಂದು ಮಹಾನಗರಪಾಲಿಕೆ ಸಿಬ್ಬಂದಿ ತಿಳಿಸಿದರು.
ರಾಯಚೂರಿನ ರೈಲ್ವೆ ಕೆಳಸೇತುವೆ ಕೆಳಗೆ ನೀರು ನಿಲ್ಲುವುದನ್ನು ತಡೆಯಲು ಆಟೊಮೆಟೆಡ್ ಮೋಟರ್ ಅಳವಡಿಸುವ ಚಿಂತನೆ ನಡೆದಿದೆಜುಬಿನ್ ಮೊಹಾಪಾತ್ರ ಮಹಾನಗರಪಾಲಿಕೆ ಆಯುಕ್ತ
ರಡು ಮೂರು ವಾರ ಮಳೆ ಮಾಯವಾಗಿತ್ತು. ಭಾನುವಾರ ದಾಖಲೆ ಮಳೆ ಸುರಿದಿದ್ದು ನಿರಂತರವಾಗಿ ಮಳೆಯಾದರೆ ಸಮಸ್ಯೆಯಾಗಲಿದೆ.ತಿಮ್ಮಣ್ಣ ನಾಯಕ ಕೆವಿಕೆ ಮುಖ್ಯಸ್ಥ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.