ADVERTISEMENT

ಗ್ರಾಮಸ್ಥರನ್ನು ಅನಾರೋಗ್ಯಕ್ಕೀಡು ಮಾಡಿದ ನೀರು!

ನರಕ ಯಾತನೆ ಅನುಭವಿಸುತ್ತಿರುವ ರೇಕಲಮರಡಿ ವಯೋವೃದ್ಧರು

ನಾಗರಾಜ ಚಿನಗುಂಡಿ
Published 26 ಮೇ 2019, 20:00 IST
Last Updated 26 ಮೇ 2019, 20:00 IST
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ರೇಕಲಮರಡಿ ಗ್ರಾಮದ ವಯೋವೃದ್ಧರೆಲ್ಲರೂ ಮೊಣಕಾಲು, ಸಂದು ನೋವಿನಿಂದ ನರಳುತ್ತಿದ್ದಾರೆ
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ರೇಕಲಮರಡಿ ಗ್ರಾಮದ ವಯೋವೃದ್ಧರೆಲ್ಲರೂ ಮೊಣಕಾಲು, ಸಂದು ನೋವಿನಿಂದ ನರಳುತ್ತಿದ್ದಾರೆ   

ರಾಯಚೂರು: ಅರ್ಧದಷ್ಟು ಮೊಣಕಾಲು ಮಡಿಸಿಕೊಂಡು, ಬೆನ್ನು ಬಾಗಿಸಿ ರಸ್ತೆಯಲ್ಲಿ ಕುಂಟುತ್ತಾ ಬರುತ್ತಿದ್ದ ಇಳಿವಯಸ್ಸಿನ ಅಮರಯ್ಯಸ್ವಾಮಿ ಅವರನ್ನು ಏನಾಗಿದೆ ನಿಮಗೆ ಎಂದು ವಿಚಾರಿಸಿದಾಗ, ಗ್ರಾಮದಲ್ಲಿರುವ ಎಲ್ಲ ವೃದ್ಧರೂ ಎಲುಬು, ಕೀಲು ನೋವಿನಿಂದ ಬಳಲುತ್ತಿದ್ದಾರೆ ಎನ್ನುವ ಆತಂಕಕಾರಿ ವಿಷಯ ತಿಳಿಸಿದರು.

‘ಅಲ್ಲಿ ನೋಡ್ರಿ ಭೀಮವ್ವ ಕಾಲೆಳೆದುಕೊಂಡು ಬರೋದು, ಈ ಕಡೆ ಕುಂಬಾರ ಬಸವರಾಜಪ್ಪ ಮೊಣಕಾಲು ಬ್ಯಾನಿಯಿಂದ ಹೆಜ್ಜೆ ಇಡಾಕ್‌ ಬರವಲ್ದು ಸೌಕಾಸ ಬರಕತ್ಯಾನ. ಮೊದಲು ಒಂದು ಕ್ವಿಂಟಲ್‌ ಜೋಳ ಹೊತ್ತು ಓಡಿ ಹೋಗ್ತಿದ್ದ ಕಕ್ಕೇರಿ ಹಣಮಂತಪ್ಪ ಮೂಲೆ ಹಿಡದಾನ... ನಮ್ಮೂರಾಗ ಮುದಿ ವಯಸ್ಸಾದ ಗಂಡಮಕ್ಳು, ಹೆಣ್ಮಕ್ಕಳಿಗೆಲ್ಲರಿಗೂ ಕಾಲುಬ್ಯಾನಿ, ಕೈಬ್ಯಾನಿ, ಸೊಂಟಬ್ಯಾನಿ ಐತಿ. ವಾರಕ್ಕೆ ಒಮ್ಮೆಯಾದ್ರೂ ದವಾಖಾನಿಗೆ ಹೋಗಿ ಬರ್ತಿವಿ’ ಎಂದರು.

ಇದು, ದೇವದುರ್ಗ ತಾಲ್ಲೂಕಿನ ತೀರಾ ಹಿಂದುಳಿದ ರೇಕಲಮರಡಿ ಗ್ರಾಮದಲ್ಲಿ ಕಂಡು ಬಂದಿದ್ದು. ಗ್ರಾಮವು ಎಲುಬು ಸಂಬಂಧಿತ ರೋಗಿಗಳ ನೆಲೆಯಾಗಿ ಮಾರ್ಪಟ್ಟಿದೆ. ಪ್ರತಿ ಮನೆಯಲ್ಲೂ ಎಲುಬು, ಕೀಲು ನೋವು ತಾಳದೆ ಹಾಸಿಗೆ ಹಿಡಿದ ರೋಗಿ ಇದ್ದಾರೆ. 50 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರೆಲ್ಲ ನೋವು ನಿವಾರಕ ಮಾತ್ರೆ (ಪೇನ್‌ ಕಿಲ್ಲರ್‌)ಗಳನ್ನು ಬಳಸುತ್ತಿದ್ದಾರೆ. ಇವರೆಲ್ಲರ ಅನಾರೋಗ್ಯಕ್ಕೆ ಫ್ಲೊರೈಡ್‌ಯುಕ್ತ ನೀರು ಕಾರಣ ಎಂಬುದನ್ನು ಕೂಡಾ ಗ್ರಾಮಸ್ಥರೇ ಹೇಳಿಕೊಳ್ಳುತ್ತಾರೆ. ಗೊತ್ತಿದ್ದೂ ನೀರು ಸೇವಿಸಿ ಅನಾರೋಗ್ಯವನ್ನು ತಂದುಕೊಳ್ಳುವ ಅನಿವಾರ್ಯ ಸ್ಥಿತಿಯಲ್ಲಿ ಗ್ರಾಮಸ್ಥರು ಅನೇಕ ವರ್ಷಗಳಿಂದ ಯಾತನಾಮಯ ಜೀವನ ನಡೆಸುತ್ತಿದ್ದಾರೆ.

ADVERTISEMENT

ಎಂಟು ಕಿಲೋ ಮೀಟರ್‌ ದೂರ ಸಿರವಾರ ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ರೇಕಲಮರಡಿ ಬಹುತೇಕ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಬಾ ನೋವು ಕಾಣಿಸಿಕೊಂಡರೆ ಮಾತ್ರ ದೇವದುರ್ಗ ಅಥವಾ ರಾಯಚೂರಿನ ರಿಮ್ಸ್‌ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಬರುತ್ತಿರುವುದಾಗಿ ಹೇಳುತ್ತಾರೆ.

‘ಶುದ್ಧ ನೀರು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಊರಲ್ಲಿ ಇರುವ ನೀರು ಬಿಟ್ಟರೆ ಬೇರೆ ನೀರಿಗೆ ಗತಿಯಿಲ್ಲ. ಕಾಲು ನೋವು ಬರುತ್ತದೆ ಎಂದು ಗೊತ್ತಾಗಿ ನಮ್ಮ ಸೊಸೆಯಂದಿರು, ಮೂರು ಕಿಲೋ ಮೀಟರ್‌ ದೂರದ ಮಲ್ಲೆದೇವರಗುಡ್ಡದ ಶುದ್ಧ ನೀರಿನ ಘಟಕದಿಂದ ನೀರು ತರಿಸಿಕೊಂಡು ಕುಡಿಯುತ್ತಾರೆ. ನಮಗೆ ನೀರಿಗಾಗಿ ಕಾಯುವುದಕ್ಕೆ ಆಗುವುದಿಲ್ಲ. ಆಗಿದ್ದು ಆಗಲಿ ಎನ್ನುತ್ತೇವೆ. ನಮ್ಮೂರಲ್ಲಿ ಸರ್ಕಾರದವರು ಶುದ್ಧ ನೀರಿನ ಘಟಕ ಮಾಡಿಕೊಡಬೇಕು’ ಎಂದು ವಯೋವೃದ್ಧ ಬಸವರಾಜ ಬೋವಿ ಮನವಿ ಮಾಡಿದರು.

ಜಲ ನಿರ್ಮಲ ಯೋಜನೆಯಡಿ ಕೊಳವೆಬಾವಿ ಕೊರೆಸಿ ಗ್ರಾಮಕ್ಕೆ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಸಮಸ್ಯಾತ್ಮಕ ರೇಕಲಮರಡಿಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿಲ್ಲ. ಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮವು ಸೌಲಭ್ಯ ಪಡೆಯುವಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಕಂದು ಬಣ್ಣದ ಹಲ್ಲುಗಳು
ಫ್ಲೋರೈಡ್‌ ಯುಕ್ತ ನೀರನ್ನು ಸೇವಿಸುವುದರಿಂದ ರೇಕಲಮರಡಿ ಗ್ರಾಮದ ಜನರ ಹಲ್ಲುಗಳಿಗೆ ಕಂದು ಬಣ್ಣ ಬಂದಿದೆ. ಹಲ್ಲುಗಳು ಸವೆದು ವಕ್ರಗೊಂಡಿವೆ. ಯಾವುದೇ ಪೇಸ್ಟ್‌ ಮತ್ತು ಬ್ರಷ್‌ನಿಂದ ಸ್ವಚ್ಛ ಮಾಡಿಕೊಂಡರೂ ಹಲ್ಲಿನ ಕಂದು ಬಣ್ಣ ಹೋಗುತ್ತಿಲ್ಲ ಎನ್ನುವುದು ಗ್ರಾಮದ ಜನರ ಅಳಲು.

**

ಶುದ್ಧ ನೀರಿನ ಘಟಕ ಮಾಡಿಕೊಡುತ್ತೇವೆ ಎಂದು ಐದು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ.
-ಸಿದ್ದಯ್ಯಸ್ವಾಮಿ ಹಿರೇಮಠ,ರೇಕಲಮರಡಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.