ರಾಯಚೂರು: ಉದ್ಯಮಿ ಮುಖೇಶ ಅಂಬಾನಿ ಮಾಲೀಕತ್ವದ ರಿಲಯನ್ಸ್ ರಿಟೇಲ್ ಕಂಪೆನಿಯು ಸಿಂಧನೂರು ನಗರದಲ್ಲಿರುವ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪೆನಿ ನಿಯಮಿತದಿಂದ ಸಗಟು ಭತ್ತ ಖರೀದಿ ಆರಂಭಿಸಿದೆ. ಇದರಿಂದಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬಂದ ಬಳಿಕ ಶುಲ್ಕ ಕಟ್ಟದೆಯೇ ಯಾರು ಬೇಕಾದರೂ ಮುಕ್ತವಾಗಿ ಕೃಷಿ ಉತ್ಪನ್ನ ಖರೀದಿಸಬಹುದು ಎನ್ನುವ ಅನುಕೂಲವನ್ನು ರಿಲಯನ್ಸ್ ರೀಟೆಲ್ ಕಂಪೆನಿಯು ಮಾಡಿಕೊಳ್ಳುತ್ತಿರುವುದು ಗಮನಾರ್ಹ.
ಈ ವರ್ಷ ಒಟ್ಟು 10 ಸಾವಿರ ಕ್ವಿಂಟಲ್ ಸೋನಾಮಸೂರಿ ಭತ್ತವನ್ನು ಮಾರುಕಟ್ಟೆ ದರಕ್ಕಿಂತ ₹100 ಹೆಚ್ಚುವರಿ ಕೊಟ್ಟು ಖರೀದಿಸುವುದಾಗಿ ರಿಲಯನ್ಸ್ ತಿಳಿಸಿದೆ. ಅದರಂತೆ ಈಗಾಗಲೇ ರೈತರ ಉತ್ಪಾದಕ ಕಂಪೆನಿಯು ಈಗಾಗಲೇ 720 ಕ್ವಿಂಟಲ್ ಭತ್ತವನ್ನು ₹1,950 (ಪ್ರತಿ ಕ್ವಿಂಟಲ್) ಖರೀದಿಸಿದೆ. ಎಪಿಎಂಸಿ ಆವರಣದಲ್ಲಿ ಈ ಭತ್ತದ ದರವು ಪ್ರತಿ ಕ್ವಿಂಟಲ್‌ಗೆ ₹1,850 ಇದೆ.
‘ನಬಾರ್ಡ್ ಯೋಜನೆಯಡಿಯಲ್ಲಿ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪೆನಿ ನಿಯಮಿತವು 2019 ರಲ್ಲಿ ಸ್ಥಾಪನೆಯಾಗಿದೆ. ಇದರಲ್ಲಿ 1100 ಕ್ಕಿಂತಲೂ ಹೆಚ್ಚು ರೈತರು ಸದಸ್ಯರಿದ್ದು, ಭತ್ತ ಹಾಗೂ ಎಣ್ಣೆಕಾಳು ಬೆಳೆಗಳನ್ನು ಕಂಪೆನಿ ಗೋದಾಮಿಗೆ ತೆಗೆದುಕೊಂಡು ಬರುತ್ತಾರೆ. ಕಂಪೆನಿಗೆ ಲಾಭ ಬರುವ ರೀತಿಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿಕೊಂಡು, ಅದರ ಲಾಭಾಂಶವನ್ನು ರೈತರಿಗೆ ಹಂಚುತ್ತಿದ್ದೇವೆ’ ಎಂದು ಸ್ವಾಸ್ಥ್ಯ ರೈತ ಉತ್ಪಾದಕ ಕಂಪೆನಿ ನಿಯಮಿತದ ವ್ಯವಸ್ಥಾಪಕ ಮಲ್ಲಿಕಾರ್ಜುನ ವಲ್ಕಂದಿನ್ನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಪಿಎಂಸಿ ಆವರಣದ ಹೊರಗಡೆ ವಹಿವಾಟು ಮಾಡುತ್ತಿರುವುದರಿಂದ ಯಾವುದೇ ಶುಲ್ಕ ಕಟ್ಟುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.
ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಲ್ಲಾಭಕ್ಷ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಎಪಿಎಂಸಿ ತಿದ್ದುಪಡಿ ಕಾಯ್ದೆ ಪ್ರಕಾರ ಆವರಣದ ಹೊರಗಡೆ ನಡೆಯುವ ಸಗಟು ವ್ಯಾಪಾರಕ್ಕೆ ಇನ್ನು ಮುಂದೆ ಶುಲ್ಕ ವಿಧಿಸುವ ಹಾಗೂ ಪ್ರಶ್ನಿಸುವ ಅಧಿಕಾರ ನಮಗೆ ಇಲ್ಲ. 58 ಎಕರೆ ಎಪಿಎಂಸಿ ಆವರಣ ಇದ್ದು, ಇಲ್ಲಿ ನಡೆಯುವ ವಹಿವಾಟಿನ ಮೇಲೆ ಮಾತ್ರ ಶುಲ್ಕ ವಿಧಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.