ADVERTISEMENT

ಕಪಗಲ್: ಗ್ರಾ.ಪಂ. ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ನರೇಗಾ, ಸ್ವಚ್ಛ ಭಾರತ ಮಿಷನ್ ಅನುದಾನ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 13:04 IST
Last Updated 2 ಸೆಪ್ಟೆಂಬರ್ 2021, 13:04 IST
ಮಾನ್ವಿಯಲ್ಲಿ ಗುರುವಾರ ಕರ್ನಾಟಕ ಪ್ರಜಾಶಕ್ತಿ ಸಮಿತಿ ಪದಾಧಿಕಾರಿಗಳು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಮಾನ್ವಿಯಲ್ಲಿ ಗುರುವಾರ ಕರ್ನಾಟಕ ಪ್ರಜಾಶಕ್ತಿ ಸಮಿತಿ ಪದಾಧಿಕಾರಿಗಳು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಮಾನ್ವಿ: ತಾಲ್ಲೂಕಿನ ಕಪಗಲ್ ಗ್ರಾಮ ಪಂಚಾಯಿತಿ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಗುರುವಾರ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹಿನುದ್ದೀನ್ , ಕಿರಿಯ ಎಂಜಿನಿಯರ್ ಶರಣಬಸವ ಹಾಗೂ ಕಂಪ್ಯೂಟರ್ ಆಪರೇಟರ್ ರಮೇಶ ಅವರು 2019-20, 2020-21ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಅವ್ಯವಹಾರ ಹಾಗೂ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಈ ಹಿಂದೆಯೇ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂಗು ಗುಂಡಿ, ಜಾನುವಾರುಗಳ ಶೆಡ್ ಹಾಗೂ ಬದು ನಿರ್ಮಾಣ ಕಾಮಗಾರಿಗಳಲ್ಲಿ ಜಾಬ್ ಕಾರ್ಡ್ ನೀಡಿದ ಕೂಲಿಕಾರರಿಗೆ ಕೆಲಸ ನೀಡದೆ ತಮಗೆ ಬೇಕಾದವರ ಹೆಸರು ಸೇರ್ಪಡೆ ಮಾಡಿ ಬೋಗಸ್ ದಾಖಲೆಗಳ ಮೂಲಕ ಅನುದಾನ ಎತ್ತುವಳಿ ಮಾಡಿದ್ದಾರೆ. ಕಾರಣ ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾಶಕ್ತಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಸೂರಿ ಹುಸೇನಪ್ಪ ನಾಯಕ, ತಾಲ್ಲೂಕು ಅಧ್ಯಕ ಆಂಜನೇಯ ನಾಯಕ, ಪ್ರಧಾನ ಕಾರ್ಯದರ್ಶಿ ಬಸವನಾಯಕ ಬುರಾನಪುರ, ಚಂದ್ರು ನಾಯಕ, ಚಾಂದ್ ಪಾಷಾ, ವೀರೇಶನಾಯಕ, ಪ್ರದೀಪ್, ಶಿವರಾಜ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.